

ಬಂಟ್ವಾಳ : ಮೇ 14ರ ಬುಧವಾರ, ಬಂಟ್ವಾಳ ತಾಲೂಕು ಖಜಾನೆ ಇಲಾಖೆಯಲ್ಲಿ ಸೇವೆ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳು 5000 ರೂ. ಲಂಚ ಸ್ವೀಕರಿಸುವ ಸಂದರ್ಭ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ದೂರುದಾರರ ಗಂಡ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ 2023ರ ಅಕ್ಟೋಬರ್‌ನಲ್ಲಿ ನಿವೃತ್ತರಾದರು. ಬಳಿಕ 2024ರ ಜೂನ್‌ನಲ್ಲಿ ಅವರು ನಿಧನರಾದರು. ಅವರ ಮರಣೋಪದಾನ (ಪಿಂಚಣಿ) ಸಂಬಂಧಿತ ವಿವರಗಳನ್ನು ಖಜಾನೆಯಲ್ಲಿ ತಿಳಿದುಕೊಳ್ಳಲು ಹೋಗಿದ್ದಾಗ, ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಎಫ್ ಡಿ ಎ ಬಸವೇಗೌಡ 10 ಸಾವಿರ ರೂ. ಲಂಚ ಬೇಡಿಕೆ ಇಟ್ಟಿದ್ದಾರೆಂದು ದೂರುದಾರರು ಮಂಗಳೂರು ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು.
ಲೋಕಾಯುಕ್ತ ಪೊಲೀಸರು ದೂರು ಆಧರಿಸಿ ಬೇಟೆಯಾಡಿದ ಸಂದರ್ಭ, ಭಾಸ್ಕರ್ ಹಾಗೂ ಬಸವೇಗೌಡ 5000 ರೂ. ಮೊತ್ತದ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.
ಈ ಕುರಿತು ಭಾಸ್ಕರ್ ಮತ್ತು ಬಸವೇಗೌಡ ವಿರುದ್ಧ ಲಂಚ ನಿಷೇಧ ಕಾಯಿದೆ ಮತ್ತು ಸರ್ಕಾರಿ ಸೇವಾ ನಿಯಮ ಉಲ್ಲಂಘನೆಯಂತೆ ಪ್ರಕರಣ ದಾಖಲಿಸಲಾಗಿದೆ. ಹಣದ ಪುರಾವೆಗಳೊಂದಿಗೆ ತನಿಖೆ ಮುಂದುವರೆದಿದ್ದು, ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದ ಪ್ರಭಾರ ಪೊಲೀಸ್ ಅಧಿಕಾರಿ ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಠಾಣೆಯ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್. ಪಿ, ಪೋಲಿಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್., ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.













