

ಕುಂದಾಪುರ: ಇಲ್ಲಿನ ಪೊಲೀಸ್ ವೃತ್ತ ನಿರೀಕ್ಷಕರಾದ ನಂಜಪ್ಪ (59) ಬುಧವಾರ ತಡರಾತ್ರಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂರು ದಿನಗಳ ಹಿಂದೆ ಹಠಾತ್ ಅನಾರೋಗ್ಯದಿಂದ ಬಳಲಿದ ಅವರನ್ನು ತುರ್ತು ಚಿಕಿತ್ಸೆಗೆ ಒಳಪಡಿಸಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ಲಿವರ್ ಸಂಬಂಧಿತ ಗಂಭೀರ ಸಮಸ್ಯೆ ಕಂಡುಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ನಂಜಪ್ಪ ಅವರು ಕಳೆದ ಒಂದು ವರ್ಷದಿಂದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಕರ್ತವ್ಯ ನಿಷ್ಠೆ, ಶಿಸ್ತಿನ ಕಾರ್ಯಪದ್ಧತಿ, ಹಾಗೂ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯು ಅವರಿಗೆ ವಿಶೇಷ ಗೌರವ ನೀಡಿತ್ತು. ಮೂಲತಃ ಭದ್ರಾವತಿಯವರಾದ ಅವರು, ಖ್ಯಾತ ಪವರ್ ಲಿಪ್ಟರ್ ಆಗಿಯೂ ಹೆಸರು ಮಾಡಿದ್ದರು. ಪೊಲೀಸ್ ಸೇವೆಗೆ ಜೊತೆಯಾಗಿ ಕ್ರೀಡಾಕ್ಷೇತ್ರದಲ್ಲೂ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು.
ಬೆಳಗ್ಗೆ 10.15 ಗಂಟೆಗೆ ಕುಂದಾಪುರ ಠಾಣೆಯಲ್ಲಿ ಸಾರ್ವಜನಿಕ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ನಂತರ ಹುಟ್ಟೂರಾದ ಭದ್ರಾವತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ. ಅವರ ಅಕಾಲಿಕ ನಿಧನದಿಂದ ಪೊಲೀಸ್ ಇಲಾಖೆಯು ಒಬ್ಬ ಶಿಸ್ತುಬದ್ಧ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ.













