ಮೇ 31; ಪುಚ್ಚೇರಿ ಶಾಲಾ ಮುಖ್ಯಶಿಕ್ಷಕ ಪದ್ಮನಾಭ ಪಿ. ಸೇವಾ ನಿವೃತ್ತಿ

ಶೇರ್ ಮಾಡಿ

ನೆಲ್ಯಾಡಿ ಕಳೆದ 24 ವರ್ಷಗಳಿಂದ ನೆಲ್ಯಾಡಿ ಗ್ರಾಮದ ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪದ್ಮನಾಭ ಪಿ.ಇವರು ಮೇ 31ರಂದು ಸೇವಾ ನಿವೃತ್ತಿಯಾಗಲಿದ್ದಾರೆ. ಇವರು ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಒಟ್ಟು 40 ವರ್ಷ ಸೇವೆ ಸಲ್ಲಿಸಿರುತ್ತಾರೆ.

ಪದ್ಮನಾಭ ಪಿ.ಅವರು 15.7.1985ರಂದು ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪಿಲಿಗೂಡು ಸರಕಾರಿ ಕಿ.ಪ್ರಾ.ಶಾಲೆಯಲ್ಲಿ ಶಿಕ್ಷಕ ವೃತ್ತಿ ಜೀವನ ಪ್ರಾರಂಭಿಸಿದ್ದರು. ಇಲ್ಲಿ 14ವರ್ಷ ಸೇವೆ ಸಲ್ಲಿಸಿ 1999ರಲ್ಲಿ ಪುತ್ತೂರು ತಾಲೂಕಿನ ಗೋಳಿತ್ತಟ್ಟು ಸರಕಾರಿ ಹಿ.ಪ್ರಾ. ಶಾಲೆಗೆ ವರ್ಗಾಣೆಗೊಂಡು ಇಲ್ಲಿ 1 ವರ್ಷ 8 ತಿಂಗಳು ಸೇವೆ ಸಲ್ಲಿಸಿದ್ದರು. ಬಳಿಕ 23.8.2001ರಲ್ಲಿ ಪುಚ್ಚೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೂರ್ಣಕಾಲಿಕ ಮುಖ್ಯಗುರುಗಳಾಗಿ ವರ್ಗಾವಣೆಗೊಂಡು ಆಗಮಿಸಿದ್ದರು. ಪುಚ್ಚೇರಿ ಶಾಲೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪುಚ್ಚೇರಿ ಶಾಲೆ 2002-03ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಪ್ರಶಸ್ತಿಯನ್ನು ಪಡೆಯುವಲ್ಲಿ ಪದ್ಮನಾಭ ಪಿ.ಇವರು ಪ್ರಮುಖ ಪಾತ್ರ ವಹಿಸಿದ್ದರು. ಹೊಸದೆಹಲಿಯ ಸಿಸಿಆರ್‌ಟಿ ವತಿಯಿಂದ ಹೈದರಾಬಾದ್‌ನಲ್ಲಿ ನಡೆದ ‘ ರೋಲ್ ಆಫ್ ಸ್ಕೂಲ್, ಇನ್ ಕನ್ವರ್ಷನ್ ಆಫ್ ನ್ಯಾಚುರಲ್ ಆಂಡ್ ಕಲ್ಚರಲ್ ಹೆರಿಟೇಜ್’ ಎಂಬ ಕಾರ್‍ಯಾಗಾರದಲ್ಲಿ ದ.ಕ.ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಶಾಲೆಯಲ್ಲಿ ಪುತ್ತೂರು ತಾಲೂಕು 3ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿ ಜನ ಮೆಚ್ಚುಗೆ ಗಳಿಸಿದ್ದರು.

ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಪಟ್ಟೆಜಾಲ್ ‘ಅನುಗ್ರಹ’ ನಿವಾಸಿ ಮುದರ ಮುಗೇರ ಹಾಗೂ ಗುಲಾಬಿ ದಂಪತಿಯ ಪುತ್ರರಾಗಿರುವ ಇವರು ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನೆಲ್ಯಾಡಿ ಸಂತಜಾರ್ಜ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ, ಉಪ್ಪಿನಂಗಡಿ ಸರಕಾರಿ ಪ.ಪೂ.ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಹಾಗೂ ಮೈಸೂರು ಮಾನಸ ಗಂಗೋತ್ರಿಯಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಶಿಕ್ಷಕರ ತರಬೇತಿ ಕೇಂದ್ರ ಮಂಗಳೂರು ಇಲ್ಲಿ ಶಿಕ್ಷಕ ತರಬೇತಿ ಶಿಕ್ಷಣ ಪಡೆದುಕೊಂಡಿದ್ದಾರೆ. ಇವರ ಪತ್ನಿ ಸುಂದರಿ ಅವರು ನೂಜಿಬಾಳ್ತಿಲ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿದ್ದಾರೆ. ಪುತ್ರಿ ಅಭಿಜ್ಞಾ ಪಿ., ಪುತ್ರ ಅಭಿಜಿನ್ ಪಿ. ವ್ಯಾಸಂಗ ಮಾಡುತ್ತಿದ್ದಾರೆ.

  •  

Leave a Reply

error: Content is protected !!