

ರಾಮಕುಂಜ: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಹಾಗೂ ದ್ವಿತೀಯ ಭಾಷೆಯಲ್ಲಿ ಪೂರ್ಣ ಅಂಕಗಳಿಸಿದ ಹಾಗೂ ಒಟ್ಟು 620ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ತೋರಿದ ಕಡಬ ತಾಲೂಕಿನ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮವು ರಾಮಕುಂಜ ವಸತಿ ಶಾಲಾ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ಅವರು ವಿದ್ಯಾರ್ಥಿಗಳಿಗೆ ಕನ್ನಡ ಶಾಲು, ಪುಸ್ತಕ, ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿ ಮಾತನಾಡಿದರು. “ಪೂರ್ಣ ಅಂಕ ಪಡೆದಿದ್ದು ಸಾಧನೆಯ ಶಿಖರ. ಅಧ್ಯಯನದ ಮೇಲೆ ದೃಢ ನಂಬಿಕೆಯಿದ್ದಾಗ ಯಾವುದೇ ಗುರಿ ಕಷ್ಟವಲ್ಲ. ಈ ಶ್ರದ್ಧೆ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೆಟ್ಟಿಲು ಸಹ ಆಗಲಿದೆ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುಬ್ರಮಣ್ಯ ಮಠ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಕೃಷ್ಣಶರ್ಮ ಅವರು, “ವಿದ್ಯಾರ್ಥಿಗಳು ಸಾಹಿತ್ಯದ ಜತೆಗೆ ಮೌಲ್ಯಪೂರ್ಣ ಜೀವನದತ್ತ ದಾರಿ ಹಿಡಿದಾಗ ಜನರ ನಂಬಿಕೆ ಗೆಲ್ಲಬಹುದು. ಎಲ್ಲಿಯೇ ಹೋದರೂ ಕನ್ನಡದ ಮೇಲಿನ ಅಭಿಮಾನ ಮರೆಯದಿರಿ ಎಂದರು” ಎಂದು ಹೇಳಿದರು.
ನಿವೃತ್ತ ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ ಅವರು, “ಪುಸ್ತಕ ಓದುವ ಹವ್ಯಾಸದಿಂದ ಮನುಷ್ಯನಿಗೆ ಒತ್ತಡ ನಿವಾರಣೆ ಸಿಗುತ್ತದೆ. ಇಂತಹ ಗೌರವ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುತ್ತವೆ” ಎಂದು ಸಲಹೆ ನೀಡಿದರು.
ಈ ಸಂದರ್ಭ 31 ವಿದ್ಯಾರ್ಥಿಗಳಿಗೆ ಕನ್ನಡ ಶಾಲು, ಪುಸ್ತಕ, ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜೊತೆಗೆ 620ಕ್ಕಿಂತ ಹೆಚ್ಚು ಅಂಕ ಪಡೆದ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಯಿತು. ವಿಶೇಷವಾಗಿ ನಿವೃತ್ತ ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ ಅವರನ್ನು ಕಸಾಪ ಕಡಬ ಘಟಕದ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಜನಾರ್ದನ ಗೌಡ ಪಣೆಮಜಲು, ಹೋಬಳಿ ಘಟಕದ ಅಧ್ಯಕ್ಷ ಪದ್ಮಪ್ಪ ಗೌಡ, ಗೌರವ ಕಾರ್ಯದರ್ಶಿಗಳಾದ ಎನ್.ಕೆ. ನಾಗರಾಜ್ ಹಾಗೂ ಡಿ. ವಸಂತ ಕುಮಾರ್, ಗೌರವ ಕೋಶಾಧಿಕಾರಿ ಬಾಲಚಂದ್ರ ಮುಚ್ಚಿಂತಾಯ, ಸದಸ್ಯರಾದ ರಮೇಶ್ ಕೋಟೆ, ವೆಂಕಟರಮಣ ಭಟ್, ಯಶವಂತ ರೈ, ಎ ಎನ್ ಕೊಳಂಬೆ, ಪ್ರೇಮ ಬಿ. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾರಂಭದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಪೋಷಕರು ಸಾಹಿತ್ಯ ಅಭಿಮಾನಿಗಳು ಪಾಲ್ಗೊಂಡಿದ್ದರು.
ಬಾಲಚಂದ್ರ ಮುಚ್ಚಿಂತಾಯ ಸ್ವಾಗತಿಸಿ, ಪ್ರೇಮ ಬಿ. ವಂದಿಸಿದರು. ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ. ಕಾರ್ಯಕ್ರಮ ನಿರೂಪಿಸಿದರು.










