

ನೆಲ್ಯಾಡಿ: ಕಡಬ ತಾಲೂಕಿನ ಶಿರಿಬಾಗಿಲು ಗ್ರಾಮದಲ್ಲಿರುವ ಗುಂಡ್ಯ ಭಾಗದ ಕೆಂಪುಹೊಳೆ ನದಿತೀರದಲ್ಲಿ ಜು.13ರಂದು ಅಪರಾಹ್ನದ ವೇಳೆಗೆ ಒಂದು ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.
ಹೊಳೆಯಲ್ಲಿ ಶವದ ತಲೆ ಮತ್ತು ಎದೆ ಭಾಗವು ನದಿಯ ಪಕ್ಕದ ಪೊದೆಗಳ ನಡುವೆ ಸಿಲುಕಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ಗಮನಿಸಿದ ಸ್ಥಳೀಯ ವ್ಯಕ್ತಿ ಈ ಬಗ್ಗೆ ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಪುತ್ತೂರಿನ ಅಗ್ನಿಶಾಮಕ ದಳದ ಸಹಾಯದಿಂದ ಶವವನ್ನು ಹೊಳೆ ನೀರಿನಿಂದ ಹೊರತೆಗೆದರು. ಮೃತ ವ್ಯಕ್ತಿಯು ಸುಮಾರು 35 ರಿಂದ 40 ವರ್ಷದ ಗಂಡಸಿನದಾಗಿದ್ದು ಯಾರು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಈ ಕುರಿತು ಕಡಬ ತಾಲೂಕು ಶಿರಾಡಿ ಗ್ರಾಮದ ಸ್ಥಳೀಯ ನಿವಾಸಿ ಶರತ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಪ್ರಕರಣ ದಾಖಲಿಸಲಾಗಿದೆ.










