ನೆಲ್ಯಾಡಿ ಬಸ್ ನಿಲ್ದಾಣ ಅನಾಥ! ಸುಸಜ್ಜಿತ ಕಟ್ಟಡವಿದ್ದರೂ ಬಸ್‌ಗಳು ಹೋಗುತ್ತಿಲ್ಲ – ಜನರ ಆಕ್ರೋಶ

ಶೇರ್ ಮಾಡಿ

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುವ ನೆಲ್ಯಾಡಿ ಪೇಟೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಪಟ್ಟಣಗಳಲ್ಲಿ ಒಂದಾಗಿದ್ದರೂ, ಸಾಕಷ್ಟು ಜನದಟ್ಟಣೆ ಇರುವ ಕೇಂದ್ರವಾದರೂ ಇಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಾತ್ರ ಅನಾಥವಾಗಿದೆ.

ಅದ್ದೂರಿ ಕಟ್ಟಡ, ನಿರ್ವಾಹಕ ಕಚೇರಿ, ಶೌಚಾಲಯ, ಕುಳಿತುಕೊಳ್ಳುವ ಆಸನ ಎಲ್ಲವೂ ಇದ್ದರೂ ನೆಲ್ಯಾಡಿ ಬಸ್ ನಿಲ್ದಾಣಕ್ಕೆ ಬಸ್‌ಗಳೇ ಬರುತ್ತಿಲ್ಲ. ಬಸ್ ನಿಲ್ದಾಣವಿದ್ದರೂ ಪ್ರಯಾಣಿಕರು ಮಾತ್ರ ಬೀದಿ ಬದಿ ನಿಲ್ಲುವ ಅವ್ಯವಸ್ಥೆ ಇಲ್ಲಿದೆ.

ಕಾಮಗಾರಿ ನೆಪ – ಜನರ ಮೋಸ!
ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ. ರೋಡ್ – ಅಡ್ಡಹೊಳೆ ನಡುವೆ ಚತುಷ್ಪಥ ಕಾಮಗಾರಿ ಆರಂಭವಾದ ದಿನದಿಂದಲೇ ಈ ಅವ್ಯವಸ್ಥೆ ಶುರುವಾಯಿತು. ಕಾಮಗಾರಿ ನೆಪದಲ್ಲಿ ನೆಲ್ಯಾಡಿ ಬಸ್ ನಿಲ್ದಾಣಕ್ಕೆ ಬಸ್‌ಗಳು ಹೋಗುವುದೇ ನಿಂತುಬಿಟ್ಟಿತು. ಆರಂಭದಲ್ಲಿ ನಿಯಂತ್ರಣಾಧಿಕಾರಿಗಳಿದ್ದಾಗ ಬಸ್‌ಗಳು ಸರಿಯಾಗಿ ನಿಲ್ದಾಣಕ್ಕೆ ಬರುತ್ತಿದ್ದವು. ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯರಿಗೆ ಇದರಿಂದ ಅನುಕೂಲವಾಗುತ್ತಿತ್ತು. ವೇಳಾಪಟ್ಟಿಯೂ ಇತ್ತು. ಆದರೆ ಕಾಮಗಾರಿ ಆರಂಭಗೊಂಡ ಬಳಿಕ ಕಾಮಗಾರಿ ನೆಪದಲ್ಲಿ ಬಸ್ ಹೋಗುವುದು ನಿಂತಿತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವ್ಯವಸ್ಥೆ ವರ್ಷಗಳ ಕಾಲದಿಂದ ಮುಂದುವರಿದುಕೊಂಡು ಬಂದಿದೆ. ಪ್ರಸ್ತುತ ಬಸ್‌ಗಳು ಪೇಟೆಯ ಮಧ್ಯ, ಅಂಗಡಿಗಳ ಪಕ್ಕದಲ್ಲಿ, ಕಿರಿದಾದ ಸರ್ವಿಸ್ ರಸ್ತೆಯಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸುವ – ಇಳಿಸುವ ಕೆಲಸ ಮಾಡುತ್ತಿವೆ.

ಸರ್ವಿಸ್ ರಸ್ತೆಗಳು ಹಾಳಾಗಿದ್ದು, ದೊಡ್ಡ ಹೊಂಡಗಳಲ್ಲಿ ಮಳೆಯ ನೀರು ನಿಂತು ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಬಸ್‌ಗಳು ರಸ್ತೆಯ ಮಧ್ಯದಲ್ಲೇ ನಿಂತು ಪ್ರಯಾಣಿಕರನ್ನು ಹತ್ತಿಸುವುದರಿಂದ ಸಂಚಾರವೇ ಬಂದಾಗುತ್ತಿದೆ. ಈ ಸಂದರ್ಭದಲ್ಲಿ ಸಂಚರಿಸುವ ಇತರ ವಾಹನಗಳು ದೀರ್ಘ ಸಾಲಾಗಿ ನಿಂತು ಜನರಿಗೆ ತಲೆನೋವು ತರುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೆಲ್ಯಾಡಿ ಪೇಟೆ ಜನರಿಗೆ ಅಸಹನೀಯ ನರಕಯಾತನೆಯಾಗಿದೆ.

ವಿದ್ಯಾರ್ಥಿಗಳ ನರಕಯಾತನೆ:
ವಿದ್ಯಾರ್ಥಿಗಳ ಸ್ಥಿತಿ ಇದಕ್ಕಿಂತಲೂ ದಯನೀಯ. ಶಾಲೆೆ, ಕಾಲೇಜಿಗೆ ಹೋಗುವ ಮಕ್ಕಳು ಸುರಕ್ಷಿತ ಬಸ್ ನಿಲ್ದಾಣ ಬಿಟ್ಟು, ರಸ್ತೆಯ ಬದಿ, ಅಂಗಡಿ, ಹೋಟೆಲ್‌ಗಳ ಮುಂಭಾಗದಲ್ಲಿ ನಿಲ್ಲಬೇಕಾಗಿದೆ. ಮಳೆಯಲ್ಲಿ, ಬಿಸಿಲಲ್ಲಿ ರಸ್ತೆ ಬದಿ ಬಸ್ ಕಾಯುವ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯ.

ಬೇಡಿಕೆಗಳು:

  • ಸರ್ವಿಸ್ ರಸ್ತೆಯ ದುರಸ್ತಿ ಕಾರ್ಯ ತುರ್ತು ಮಾಡಬೇಕು.
  • ಬಸ್‌ಗಳು ನಿಲ್ದಾಣಕ್ಕೆ ಬರುವಂತೆ ಕ್ರಮ ಕೈಗೊಳ್ಳಬೇಕು.
  • ಬಸ್ ನಿಲ್ದಾಣದ ಸುಸಜ್ಜಿತ ಕಟ್ಟಡ ಹಾಳಾಗದಂತೆ ನೋಡಿಕೊಳ್ಳಬೇಕು.

ಈ ದುಃಸ್ಥಿತಿಗೆ ತಕ್ಷಣ ಅಂತ್ಯ ಬರಬೇಕಾಗಿದೆ. ಬಸ್‌ಗಳನ್ನು ನಿಲ್ದಾಣಕ್ಕೆ ಬರುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ವಿಸ್ ರಸ್ತೆಯ ದುರಸ್ತಿ ಕಾರ್ಯ ತ್ವರಿತಗೊಳಿಸಬೇಕು. ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯರು ಸುರಕ್ಷಿತವಾಗಿ ಬಸ್ ಹತ್ತುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರ ಆಕ್ರೋಶ ಎದುರಿಸಬೇಕಾಗಿದೆ.
-ಸತೀಶ್ ಕೆ.ಎಸ್., ಅಧ್ಯಕ್ಷರು, ಅಧ್ಯಕ್ಷರು ವರ್ತಕರ ಹಾಗೂ ಕೈಗಾರಿಕಾ ಸಂಘ, ನೆಲ್ಯಾಡಿ – ಕೌಕ್ರಾಡಿ

ಬಸ್ ನಿಲ್ದಾಣವಿದ್ದರೂ ಬಸ್ ಇಲ್ಲ ಎಂಬ ಹಾಸ್ಯಾಸ್ಪದ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳಾದ ನಾವು ಪ್ರತೀ ದಿನ ನರಕ ಯಾತನೆ ಅನುಭವಿಸುತ್ತಿದ್ದೇವೆ. ಗ್ರಾಮೀಣ ಪ್ರದೇಶದ ಸಾರಿಗೆ ವ್ಯವಸ್ಥೆಯ ಗೌರವ ಉಳಿಸಬೇಕಾದರೆ ಬಸ್ ನಿಲ್ದಾಣಕ್ಕೆ ಮತ್ತೆ ಜೀವ ತುಂಬುವುದು ತಕ್ಷಣದ ಅಗತ್ಯ.
-ತನುಷ್, ವಿದ್ಯಾರ್ಥಿ, ಸಂತ ಜಾರ್ಜ್ ವಿದ್ಯಾ ಸಂಸ್ಥೆ, ನೆಲ್ಯಾಡಿ

ಬಸ್ ನಿಲ್ದಾಣಕ್ಕೆ ಬಸ್ಸುಗಳು ಬಾರದೆ ಇರುವುದರಿಂದ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ವೃದ್ಧರು ಸೇರಿದಂತೆ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆ, ಕಾಲೇಜು ತಲುಪಲು ಕಷ್ಟವಾಗುತ್ತಿದ್ದು, ಈ ಸಮಸ್ಯೆಯನ್ನು ಗಂಭೀರವಾಗಿ ಗಮನಿಸಿ ಶೀಘ್ರದಲ್ಲಿ ಬಸ್ ಸೇವೆಯನ್ನು ನಿಲ್ದಾಣಕ್ಕೆ ಬರುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
-ಪ್ರಕಾಶ್ ಕೆ ವೈ, ಅಧ್ಯಕ್ಷರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ನೆಲ್ಯಾಡಿ

  •  

Leave a Reply

error: Content is protected !!