ನೆಲ್ಯಾಡಿ: ಕೌಕ್ರಾಡಿ ದೋಂತಿಲ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ 22ನೇ ವರ್ಷದ ಗಣೇಶೋತ್ಸವ

ಶೇರ್ ಮಾಡಿ

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ದೋಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.27ರಿಂದ 29ರವರೆಗೆ ಭಕ್ತಿ, ಭಜನೆ, ಯಕ್ಷಗಾನ ತಾಳ ಮದ್ದಳೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಆಗಸ್ಟ್ 27ರಂದು ಬೆಳಗ್ಗೆ ತೆನೆ ಕಟ್ಟುವ ವಿಧಿ, ಗಣೇಶ ವಿಗ್ರಹ ಪ್ರತಿಷ್ಠೆ, ಗಣಹೋಮ, ಮಹಾಪೂಜೆ ನೆರವೇರಲಿದ್ದು, ಬಳಿಕ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ದೋಂತಿಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಹಾಪೂಜೆಯ ನಂತರ ಪ್ರಸಾದ ವಿತರಣೆ ಕೂಡಾ ನಡೆಯಲಿದೆ.

ಆಗಸ್ಟ್ 28ರಂದು ಬೆಳಗ್ಗೆ ನಿತ್ಯಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಶ್ರೀ ವಿನಾಯಕ ಭಜನಾ ಮಂಡಳಿ ರಾಮನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಆಗಸ್ಟ್ 29ರಂದು ಬೆಳಗ್ಗೆ ವಿಶೇಷ ಪೂಜೆ, ಶ್ರೀ ಮಹಾಗಣಪತಿ ಹೋಮ, ಹೋಮದ ಪೂರ್ಣಾಹುತಿ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಅಮ್ಮಿ ನಲ್ಗುತ್ತು ರಾಮನಗರ ಅವರ ಪ್ರಾಯೋಜಕತ್ವದಲ್ಲಿ ಶ್ರೀ ವಿನಾಯಕ ಯಕ್ಷಗಾನ ಮಂಡಳಿ ರಾಮನಗರ ಹಾಗೂ ಅತಿಥಿ ಕಲಾವಿದರ ಸಹಭಾಗಿತ್ವದಲ್ಲಿ “ಶಿವಭಕ್ತ ವೀರಮಣಿ” ಯಕ್ಷಗಾನ ತಾಳ ಮದ್ದಳೆ ಪ್ರದರ್ಶನವಿದೆ. ಇದಾದ ಬಳಿಕ ಶ್ರೀ ಶಾಸ್ತಾರೇಶ್ವರ ಭಜನಾ ಮಂಡಳಿ ಹಾರ್ಫಳ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 9 ಗಂಟೆಯಿಂದ ಶ್ರೀ ಮಹಾಗಣಪತಿ ದೇವರಿಗೆ 12 ಅಗಲು ರಂಗಪೂಜೆ, ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮತ್ತು ರಾತ್ರಿ 10 ಗಂಟೆಗೆ ಗಣೇಶ ವಿಸರ್ಜನೆ ನಡೆಯಲಿದೆ.

ಈ ಉತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇವಸ್ಥಾನದ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ಬಾಳ್ತಿಲ್ಲಾಯ ಹಾಗೂ ಅರ್ಚಕರಾದ ಯು.ಕೆ. ಅನಂತಪದ್ಮನಾಭ ಭಕ್ತರಿಗೆ ಕೋರಿದ್ದಾರೆ.

  •  

Leave a Reply

error: Content is protected !!