

ನೆಲ್ಯಾಡಿ: ನೆಲ್ಯಾಡಿ – ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯವರ ವತಿಯಿಂದ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶ್ರೀ ಶಬರೀಶ ಕಲಾಮಂದಿರ, ನೆಲ್ಯಾಡಿ – ಕೌಕ್ರಾಡಿಯಲ್ಲಿ ಬುಧವಾರದಂದು, ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರ ಕೃಪಾಶೀರ್ವಾದದೊಂದಿಗೆ ವಿಜೃಂಭಣೆಯಿಂದ ನೆರವೇರಲಿದೆ.
ಬೆಳಗ್ಗೆ 6.00ಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ ಅವರ ಪೌರೋಹಿತ್ಯದಲ್ಲಿ ಶ್ರೀ ಗಣಪತಿ ದೇವರ ಪ್ರತಿಷ್ಠೆ ನಡೆಯಲಿದ್ದು, ಬಳಿಕ ನೆಲ್ಯಾಡಿ – ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಹಾಗೂ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಜರುಗಲಿದೆ.
ಬಳಿಕ ಅಯ್ಯಪ್ಪ ಸ್ವಾಮಿ ದೇವರಿಗೆ ಸೀಯಾಳ ಅಭಿಷೇಕ, ಗಣಹೋಮ ನೆರವೇರಿಸಲಿದ್ದು, ಬೆಳಗ್ಗೆ 8.30ರಿಂದ ಛದ್ಮವೇಷ ಸ್ಪರ್ಧೆ, ಶ್ರೀ ಕೃಷ್ಣ ವೇಷ ಸ್ಪರ್ಧೆಗಳು ನಡೆಯಲಿವೆ. ಬೆಳಗ್ಗೆ 10.30ಕ್ಕೆ ಧರ್ಮಜಾಗೃತಿ ಸಭೆ ನಡೆಯಲಿದ್ದು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮೋಹನ್ ಗೌಡ ಕಟ್ಟೆಮಜಲು ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸುಬ್ಬಪ್ಪ ಕೈಕಂಬ ನೀಡಲಿದ್ದು, ಕಾರ್ಯಕ್ರಮವನ್ನು ಮಂಗಳೂರು ಸೇವಾ ಭಾರತಿಯ ಚೀಪ್ ಎಕ್ಸಿಕ್ಯೂಟಿವ್ ಆಫೀಸರ್ ಪೃಥ್ವಿಪಾಲ್ ಕೆ. ಉದ್ಘಾಟಿಸಲಿದ್ದಾರೆ. ಬೆಳ್ತಂಗಡಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ ಪುಷ್ಪಗಿರಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಬಾಬು ನಾಯ್ಕ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 1.00ಕ್ಕೆ ಶ್ರೀ ಗಣಪತಿ ದೇವರಿಗೆ ಮಹಾರಂಗಪೂಜೆ, ಮಹಾಪೂಜೆ ನೆರವೇರಿಸಲಿದ್ದು, ಪ್ರಸಾದ ವಿತರಣೆಯ ನಂತರ ಅನ್ನಸಂತರ್ಪಣೆ ಜರುಗಲಿದೆ. ಬಳಿಕ ಶ್ರೀಮತಿ ಸುರೇಖಾ ಹಾಗೂ ಶಿಷ್ಯವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ ಗಂಟೆ 3.00ರಿಂದ ಶ್ರೀ ಗಣಪತಿ ದೇವರ ಭವ್ಯ ಶೋಭ ಯಾತ್ರೆ ನಡೆಯಲಿದೆ.











