

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯನಗರದಲ್ಲಿ ಶುಕ್ರವಾರದಂದು ಶಿಕ್ಷಕರ ದಿನಾಚರಣೆ, ಓಣಂ ಹಬ್ಬ ಹಾಗೂ ಸಾಮೂಹಿಕ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಮೂಲಚಂದ್ರ ಕಾಂಚನ ಅವರು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಗಳಿಗೆ ತಿಲಕ ಇಟ್ಟು ಸಿಹಿ ಹಂಚಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕರ ದಿನದ ಅಂಗವಾಗಿ ಎಲ್ಲಾ ಶಿಕ್ಷಕರಿಗೆ ಹೂ ನೀಡುವ ಮೂಲಕ ಅಭಿನಂದಿಸಿದರು.
ಶಿಕ್ಷಕಿ ಸೂರ್ಯ ಅವರು ಓಣಂ ಹಬ್ಬದ ಹಿನ್ನೆಲೆ ಹಾಗೂ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳಿಂದ ಆಯೋಜಿಸಲಾದ ಶಿಕ್ಷಕರ ದಿನಾಚರಣೆಯಲ್ಲಿ ಗುರು-ಶಿಷ್ಯರ ಪವಿತ್ರ ಬಾಂಧವ್ಯವನ್ನು ಸದೃಢಗೊಳಿಸುವ ಸಲುವಾಗಿ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರ ಪಾದಪೂಜೆ ನೆರವೇರಿಸಲಾಯಿತು.
ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಕಾವ್ಯ ಅವರು ಮಾತನಾಡಿ, “ಕೇವಲ ಪ್ರಮಾಣಪತ್ರಕ್ಕಾಗಿ ಶಿಕ್ಷಣ ಪಡೆಯದೆ, ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಗಳಾಗಿ ಬದುಕಬೇಕು” ಎಂದು ಕಿವಿಮಾತು ಹೇಳಿದರು. ಕನ್ನಡ ಮಾಧ್ಯಮ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕಿ ಭಾಗೀರಥಿ ಅವರುವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚೈತನ್ಯ.ಎಚ್ ಸ್ವಾಗತಿಸಿದರು, ಬೃಂದಾ ವಂದಿಸಿದರು, ಯಶ್ವಿನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಮನರಂಜನಾ ಆಟಗಳನ್ನು ನಡೆಸಿ ಬಹುಮಾನ ವಿತರಿಸಿದರು. ಓಣಂ ಸಂಭ್ರಮದ ಅಂಗವಾಗಿ ಮಧ್ಯಾಹ್ನ ವಿಶೇಷ ಭೋಜನವನ್ನು ಆಯೋಜಿಸಲಾಗಿತ್ತು.






