

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ನೆಲ್ಯಾಡಿ ಕುಂಡಡ್ಕ ನಿವಾಸಿ, ಬಹುಮುಖ ಕಲಾವಿದ ವಿಶ್ವನಾಥ ಶೆಟ್ಟಿ ಅವರು 2025ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.
ಸಂಗೀತ, ನಾಟಕ, ಸಾಹಿತ್ಯ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಅಸಾಮಾನ್ಯ ಕೊಡುಗೆಯನ್ನು ನೀಡುತ್ತಿರುವ ವಿಶ್ವನಾಥ ಶೆಟ್ಟಿಯವರು *ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿಯ ನಿರ್ದೇಶಕರಾಗಿದ್ದು, ತಮ್ಮ ಕಲಾಕೇಂದ್ರದ ಮೂಲಕ ಕೀಬೋರ್ಡ್ ಹಾಗೂ ಸುಗಮ ಸಂಗೀತ ತರಬೇತಿ ನೀಡಿ ಅನೇಕ ಪ್ರತಿಭಾವಂತರನ್ನು ಬೆಳೆಸಿದ್ದಾರೆ.
ರಾಜ್ಯ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಗಾಯಕರಾಗಿ ಗುರುತಿಸಿಕೊಂಡಿರುವ ಇವರು ತುಳು ನಾಟಕ ಸಂಗೀತ ನಿರ್ದೇಶಕರಾಗಿಯೂ ಪ್ರಸಿದ್ಧರಾಗಿದ್ದು, ಕುವೈಟ್, ದುಬೈ ಸೇರಿದಂತೆ ವಿದೇಶದ ನಾಟಕ ವೇದಿಕೆಗಳಿಗೂ ತಮ್ಮ ಸಂಗೀತದ ಸವಿ ಹರಿಸಿದ್ದಾರೆ.
‘ಕೇಪುದ ಬೆಡಿ’, ‘ಮಾತೃದೇವೋಭವ’, ‘ಭೂತ ಉಂಡುಗೆ’, ‘ತೂದು ಕಲ್ಪೊಡು’, ‘ಕೊಲೆಗಾರೆ ಏರ್?’ ಮುಂತಾದ ತುಳು ನಾಟಕಗಳನ್ನು ರಚಿಸಿ ನಿರ್ದೇಶಿಸಿರುವ ವಿಶ್ವನಾಥ ಶೆಟ್ಟಿಯವರು ಯಕ್ಷಗಾನ ಕಲಾವಿದ, ಕಥೆಗಾರ, ಕವಿ, ಹಾಸ್ಯ ಲೇಖಕ ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೇ ಅನೇಕ ತುಳು ನಾಟಕಗಳಿಗೆ ಹಾಡುಗಳ ರಚನೆ, ಕವನ ಮತ್ತು ಸಂಗೀತ ಸಂಯೋಜನೆ ಮಾಡಿದ್ದಾರೆ.
ಮಂಗಳೂರು ಆಕಾಶವಾಣಿಯ ಯುವವಾಣಿ ವಿಭಾಗದಲ್ಲಿ ಹಾಗೂ ಕನ್ನಡ ಸಂಘ ದೆಹಲಿ, ಮುಂಬೈಯ ವೇದಿಕೆಗಳಲ್ಲಿಯೂ ತಮ್ಮ ಗಾಯನದ ಮೆರುಗು ತೋರಿದ್ದಾರೆ.
ಸಾಮಾಜಿಕ ಸೇವೆಗೂ ಕಲೆಗೂ ಸಮಬಲ ನೀಡಿರುವ ಇವರು ನೆಲ್ಯಾಡಿ ಜೆಸಿಐ ಅಧ್ಯಕ್ಷ, ಆಲಂಕಾರು ಲಯನ್ಸ್ ಕ್ಲಬ್ ಹಾಗೂ ನೆಲ್ಯಾಡಿ ಸೀನಿಯರ್ ಚೇಂಬರ್ ಸದಸ್ಯರಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆ ಯ ಕಾರ್ಯಕ್ರಮ ಅಧಿಕಾರಿಯಾಗಿ ಅನೇಕ ಸಾರ್ವಜನಿಕ ಸೇವಾ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅಶಕ್ತ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದ ನೆರವು, ಕೋವಿಡ್ ಸಂದರ್ಭದಲ್ಲಿ ನೆರವು ನೀಡಿದ್ದಾರೆ.
ಕಲೆ ಮತ್ತು ಸೇವೆಗೆ ಅವರ ಅಸಾಮಾನ್ಯ ಕೊಡುಗೆಗಾಗಿ ಇವರು ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ (2023), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಪ್ರತಿಭೋತ್ಸವ-2008 ನಾಟಕ ನಿರ್ದೇಶನ ಪ್ರಶಸ್ತಿ, ಜೆಸಿಐ ಕಲಾರತ್ನ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ.






