ಆಳ್ವಾಸ್ ಕಾಲೇಜಿಗೆ ಬಾಲಕ, ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ


ನೆಲ್ಯಾಡಿ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ, ಮಂಗಳೂರು ಜಿಲ್ಲೆ ಹಾಗೂ ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ 2025ರ ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ ನ.1ರಂದು ಅದ್ಧೂರಿಯಾಗಿ ನೆರವೇರಿತು.
ಬೆಳಿಗ್ಗೆ 6.30ಕ್ಕೆ ಪುರುಷರ ವಿಭಾಗದ ಓಟಕ್ಕೆ ವಲಯಮಟ್ಟದ ನೋಡಲ್ ಅಧಿಕಾರಿ ಕುಶಾಲಪ್ಪ ಗೌಡ ಧ್ವಜ ಪ್ರದಾನ ಮಾಡಿ ಚಾಲನೆ ನೀಡಿದರು. ಮಹಿಳಾ ವಿಭಾಗದ ಓಟಕ್ಕೆ ಬೆಳಿಗ್ಗೆ 7.00ಕ್ಕೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್ ಧ್ವಜ ಪ್ರದಾನ ಮಾಡಿ ಚಾಲನೆ ನೀಡಿದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಸ್ತು ಎಂಬುದು ಕ್ರೀಡೆಯ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಕ್ರೀಡೆಯು ಮಹತ್ವದ್ದಾಗಿದೆ. ಸರ್ಕಾರವು ಶಾಲಾ ಹಂತದಿಂದಲೇ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಸಂತ ಜಾರ್ಜ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಫಾ.ನೋಮಿಸ್ ಪಿ.ಕುರಿಯಾಕೋಸ್ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಬೆಳ್ತಂಗಡಿ ಸರ್ಕಾರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಧಾಕೃಷ್ಣ ಹಾಗೂ ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಸಲಾಂ ಬಿಲಾಲ್ ಮಾತನಾಡಿ, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ರಾಧಾಕೃಷ್ಣ, ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚಾರ್ಜ್ ಟಿ. ಎಸ್., ನೆಲ್ಯಾಡಿ ಗ್ರಾ.ಪಂ. ಸದಸ್ಯ ಮಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ದಕ್ಷಿಣ ಕನ್ನಡದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡರು. ಕಾಲೇಜಿನ ಪ್ರಾಚಾರ್ಯ ಎಲಿಯಾಸ್ ಎಂ.ಕೆ. ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಚೇತನ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಮಹಮ್ಮದ್ ಹಾರಿಸ್ ಎನ್. ವಂದಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾಲೇಜುಗಳ ಸುಮಾರು 60 ಬಾಲಕರು ಹಾಗೂ 30 ಬಾಲಕಿಯರು ಕ್ರಾಸ್ ಕಂಟ್ರಿ ಓಟದಲ್ಲಿ ಭಾಗವಹಿಸಿದರು. ಬಾಲಕ, ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಮೂಡುಬಿದ್ರೆ ಆಳ್ವಾಸ್ ಪಡೆದುಕೊಂಡಿತು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಬಾಲಕರ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು, ಬಾಲಕಿಯರ ವಿಭಾಗದಲ್ಲಿ ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ಬಾಲಕರ ವೈಯಕ್ತಿಕ ವಿಭಾಗದಲ್ಲಿ:
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದರ್ಶನ್ ಪ್ರಥಮ ಸ್ಥಾನವನ್ನು, ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಸಾಗರ್ ದ್ವಿತೀಯ ಸ್ಥಾನವನ್ನು, ವರುಣ್ ಎಚ್ ಎಲ್ ತೃತೀಯ ಸ್ಥಾನವನ್ನು ಪಡೆದುಕೊಂಡರು.
ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ:
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ನಾಗಿಣಿ ಪ್ರಥಮ ಸ್ಥಾನವನ್ನು, ಚರಿಷ್ಮಾ ದ್ವಿತೀಯ ಸ್ಥಾನವನ್ನು, ಗಾನ್ವಿ ತೃತೀಯ ಸ್ಥಾನವನ್ನು ಪಡೆದುಕೊಂಡರು.






