ಪಟ್ಟೂರು: ಅಕ್ರಮ ದನ ಸಾಗಾಟ – ಧರ್ಮಸ್ಥಳ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ

ಶೇರ್ ಮಾಡಿ

ಪಟ್ಟೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ದನ ಸಾಗಾಟ ಪ್ರಕರಣ ಪತ್ತೆಯಾಗಿ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನ.2ರಂದು ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿ ಖಚಿತ ಮಾಹಿತಿಯ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ಸಮರ್ಥ ಆರ್. ಗಾಣಿಗೇರ ನೇತೃತ್ವದ ತಂಡವು ಸ್ವಿಫ್ಟ್ ಕಾರು ತಡೆದು ಪರಿಶೀಲಿಸುವ ವೇಳೆ, ಕಾರಿನೊಳಗೆ ಅಕ್ರಮವಾಗಿ ಮೂರು ದನಗಳನ್ನು ಸಾಗಾಟ ಮಾಡಲಾಗುತ್ತಿದ್ದುದನ್ನು ಪತ್ತೆ ಹಚ್ಚಿದರು.

ಬಂಧಿತರಾದವರು ಉಳ್ಳಾಲ ತಾಲೂಕಿನ ಸಜಿಪ ಪಡು ಗ್ರಾಮದ ಕೋಟೆಕನಿ ನಿವಾಸಿ ಮಹಮ್ಮದ್ ಸಿನಾನ್ (25) ಹಾಗೂ ಸಜಿಪನಾಡು ಗ್ರಾಮದ ತಂಚಿಬೆಟ್ಟು ನಿವಾಸಿ ತೌಸೀಫ್ (38) ಎನ್ನಲಾಗಿದೆ.

ಪಟ್ಟೂರು ನಿವಾಸಿ ಜೋಹರಾ ಎಂಬವರಿಂದ ಆರೋಪಿಗಳು ಈ ಮೂರು ದನಗಳನ್ನು ಖರೀದಿಸಿ ಮಾಂಸ ಮಾಡಲು ತೆಗೆದುಕೊಂಡು ಹೋಗುತ್ತಿದ್ದುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ಬಾಯಿಬಿಟ್ಟಿದ್ದಾರೆ.

ಮೂರು ದನಗಳ ಮೌಲ್ಯ ರೂ.20 ಸಾವಿರ ಆಗಿದ್ದು, ಬಳಸಿದ ಕಾರಿನ ಮೌಲ್ಯ ಸುಮಾರು ರೂ.2 ಲಕ್ಷ ಎಂದು ಅಂದಾಜಿಸಲಾಗಿದೆ. ಪೊಲೀಸರು ಕಾರು ಹಾಗೂ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ, ಜಾನುವಾರು ಸಂರಕ್ಷಣಾ ಕಾಯಿದೆ ಹಾಗೂ ಪ್ರಾಣಿ ಹಿಂಸೆ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  •  

Leave a Reply

error: Content is protected !!