ಕಡಬ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಕಣಜ” ಪುಸ್ತಕದ ಅನಾವರಣ

ಶೇರ್ ಮಾಡಿ

ಕಡಬ: ಹನುಮಾನ್ ನಗರದಲ್ಲಿರುವ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ಕನ್ನಡ ಸಂಘದ ಪ್ರಾಯೋಜಿತ ಮಕ್ಕಳ ಬರವಣಿಗೆಗಳ ಸಂಗ್ರಹ “ಕಣಜ” ಪುಸ್ತಕದ ಅನಾವರಣ ಕಾರ್ಯಕ್ರಮವು ಸಂಸ್ಥೆಯ ಯಾದವಶ್ರೀ ಸಭಾಂಗಣದಲ್ಲಿ ಅದ್ಧೂರಿಯಾಗಿ ನೆರವೇರಿತು.

ಕಾರ್ಯಕ್ರಮಕ್ಕೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಸದಾಶಿವ ಭಟ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ನಿವೃತ್ತ ವಿಜ್ಞಾನ ಶಿಕ್ಷಕ ಯಶವಂತ ರೈ ಉಪಸ್ಥಿತರಿದ್ದು “ಕಣಜ” ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದ ಅವರು ಕನ್ನಡ ಭಾಷೆ ಕೇವಲ ಒಂದು ಪಾಠ್ಯ ವಿಷಯವಲ್ಲ, ಅದು ನಮ್ಮ ಜೀವನದ ಭಾಗವಾಗಿದೆ. ಇಂದಿನ ಆಂಗ್ಲ ಭಾಷೆಯ ಪ್ರಾಬಲ್ಯದಲ್ಲಿ ಕನ್ನಡ ತನ್ನ ಸ್ಥಾನವನ್ನು ಕಳೆದುಕೊಳ್ಳಬಾರದು. ಮಕ್ಕಳು ಬರವಣಿಗೆಯಲ್ಲಿಯೂ, ಸಾಹಿತ್ಯಾಭಿರುಚಿಯಲ್ಲಿಯೂ ತೊಡಗಿಕೊಂಡು ಭಾಷೆಯ ಗೌರವವನ್ನು ಉಳಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರಿನ ಸಹಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ, ಸಂಸ್ಥೆಯ ಸಂಚಾಲಕ ಅಜಿತ್ ರೈ ಆರ್ತಿಲ, ಪ್ರೌಢ ವಿಭಾಗದ ಮುಖ್ಯಮಾತಾಜಿ ಶೈಲಶ್ರೀ ಎಸ್. ರೈ, ಆಂಗ್ಲ ಮಾಧ್ಯಮ ಮುಖ್ಯಗುರು ವಸಂತ ಕೆ., ಕನ್ನಡ ಸಂಘದ ಗೌರವಾಧ್ಯಕ್ಷೆ ಪವಿತ್ರಾ ಎನ್. ಹಾಗೂ ಕನ್ನಡ ಸಂಘದ ಅಧ್ಯಕ್ಷ ವಿದ್ಯಾರ್ಥಿ ಸುಮಂತ್ ಕೆ. ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿ ಸುಮಂತ್ ಕೆ. ಸ್ವಾಗತಿಸಿದರು. ಜಿ. ಭವಿಷ್ಯ ಕೆ. ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾರ್ವರಿ ಬನ್ನಿಂತ್ತಾಯ ವಂದಿಸಿದರು.

  •  

Leave a Reply

error: Content is protected !!