

ನೆಲ್ಯಾಡಿ: ಸಂಪ್ಯಾಡಿ ಸೈಂಟ್ ಮೇರೀಸ್ ಓರ್ಥೋಡೋಕ್ಸ್ ಚರ್ಚ್ ಓಸಿವೈಎಂ ಹಾಗೂ ಎಂ.ಜಿ.ಒ.ಸಿ.ಎಸ್.ಎಂ ಸಂಘಟನೆಗಳು, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಮತ್ತು ಮಂಗಳೂರು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಇವರ ಸಹಭಾಗಿತ್ವದಲ್ಲಿ ಭಾನುವಾರ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರದಲ್ಲಿ 70ಕ್ಕೂ ಹೆಚ್ಚು ಜನರು ಚಿಕಿತ್ಸೆಯ ಪ್ರಯೋಜನ ಪಡೆದರು.

ಕಾರ್ಯಕ್ರಮವನ್ನು ಶಿರಾಡಿ ಗ್ರಾಮ ಪಂಚಾಯಿತಿ ಸದಸ್ಯೆ ರಾಧ ದೀಪಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ ಫಾ.ವಿ.ಸಿ.ಜೋಸ್ ಅವರು ಈ ದೇವಾಲಯವು ಸದಾ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಜಾತಿ–ಧರ್ಮ ಭೇದವಿಲ್ಲದೆ ಎಲ್ಲರಿಗೂ ಸಹಾಯ ಹಸ್ತ ಚಾಚುವ ಕಾರ್ಯದಲ್ಲಿ ತೊಡಗಿದೆ ಎಂದು ಹೇಳಿದರು. ದಂತ ಶಿಬಿರದ ಅಗತ್ಯತೆ ಮತ್ತು ಸಮಾಜದಲ್ಲಿ ಇದರ ಮಹತ್ವವನ್ನು ವಿವರಿಸಿದರು.
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಅಧ್ಯಕ್ಷ ಪ್ರಕಾಶ್ ಕೆ.ವೈ ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ದಂತ ಆರೋಗ್ಯದ ಬಗ್ಗೆ ಜಾಗೃತಿ ಇನ್ನೂ ತಲುಪಬೇಕಿದೆ. ಜನರು ಸಾಮಾನ್ಯವಾಗಿ ದಂತ ನೋವು ಹೆಚ್ಚಾದಾಗ ಮಾತ್ರ ವೈದ್ಯರನ್ನು ಸಂಪರ್ಕಿಸುವ ಪ್ರವೃತ್ತಿ ಹೊಂದಿದ್ದಾರೆ. ಈ ಶಿಬಿರದ ಮೂಲಕ ನಾವು ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ತಕ್ಷಣ ಚಿಕಿತ್ಸೆ ನೀಡುವುದು ಎಂಬ ಎರಡು ಗುರಿಗಳನ್ನು ಸಾಧಿಸಿದ್ದೇವೆ ಎಂದು ಹೇಳಿದರು. ಶಿಬಿರಕ್ಕೆ ಸಹಭಾಗಿಯಾದ ವೈದ್ಯಕೀಯ ತಂಡಕ್ಕೆ ಧನ್ಯವಾದ ಹೇಳಿದರು.
ಮಂಗಳೂರು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನ ಡೆಂಟಲ್ ಪ್ರೊಫೆಸರ್ ಡಾ. ನವ್ಯ ಅವರು ಮಾತನಾಡಿ ದಂತ ಆರೋಗ್ಯವು ಒಬ್ಬರ ಒಟ್ಟು ಆರೋಗ್ಯದ ಮೂಲ. ಬಾಯಿಯಲ್ಲಿನ ಸೋಂಕುಗಳು ಹೃದಯ, ಮಧುಮೇಹ ಸೇರಿದಂತೆ ಅನೇಕ ಶಾರೀರಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ರತಿಯೊಬ್ಬರೂ 6 ತಿಂಗಳಿಗೊಮ್ಮೆ ದಂತ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಸರಿಯಾದ ಬ್ರಷಿಂಗ್ ಪದ್ಧತಿ ಮತ್ತು ಆಹಾರ ಶಿಸ್ತು ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಬಾಜೆ ಮಾರ್ ಇಗ್ನಾತ್ತಿಯೋಸ್ ಚರ್ಚ್ ಧರ್ಮಗುರು ಫಾ. ಜೋನ್ ಮ್ಯಾಥ್ಯು ಕೋರ್ ಎ ಪಿಸ್ಕೋಪ, ಓರಲ್ ಸರ್ಜನ್ ಡಾ. ಜೆಫರ್ ಸನ್ ಉಪಸ್ಥಿತರಿದ್ದರು.
ಜಾರ್ಜ್ ಟಿ.ಎಸ್ ಸ್ವಾಗತಿಸಿದರು, ಸಚಿನ್ ಕಾರ್ಯಕ್ರಮ ನಿರೂಪಿಸಿದರು, ವರ್ಗೀಸ್ ವಂದಿಸಿದರು.






