

ಕಡಬ: ಕುಟುಂಬ ಕಲಹದಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ ರಾಕೇಶ್ (36) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಕಡಬ ಕುಟ್ರುಪ್ಪಾಡಿ ನಿವಾಸಿ ಸೊಲೊಮನ್(54) ಅವರ ದೂರಿನ ಪ್ರಕಾರ, ರಾಕೇಶ್ ಕಡಬ ಕಳಾರ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ಗ್ಯಾರೇಜ್ ನಡೆಸುತ್ತಿದ್ದು, ಆತನ ಪತ್ನಿಯು ಆಕೆಯ ಗೆಳೆಯನೊಬ್ಬನೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ ವಿಚಾರ ತಿಳಿದ ನಂತರ ರಾಕೇಶ್ ಮಾನಸಿಕವಾಗಿ ತೀವ್ರವಾಗಿ ಬೇಸರಗೊಂಡಿದ್ದನು.
ಈ ಮನಸ್ತಾಪದ ಹಿನ್ನೆಲೆಯಲ್ಲಿ ನ.19ರಂದು ಸಂಜೆ ಕಡಬ ಬಜಾಜ್ ಶೋ ರೂಂ ಹಿಂಭಾಗದಲ್ಲಿ ಅಮಲು ಪದಾರ್ಥ ಮಿಶ್ರಿತ ಇಲಿಪಾಷಾನ ಸೇವಿಸಿ ರಾಕೇಶ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿತ್ತು. ಸ್ಥಳೀಯರು ತಕ್ಷಣವೇ ರಾಕೇಶ್ ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫಾ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದರು.
ಅಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾಕೇಶ್ ನ.26ರಂದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.






