

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಪೂರ್ವ ವಿದ್ಯಾರ್ಥಿ ಸಂಘದ ವಾರ್ಷಿಕ “ಸ್ನೇಹ ಸಂಭ್ರಮ – 2025” ಕಾರ್ಯಕ್ರಮವು ನ.29 ಮತ್ತು 30ರಂದು ಯಶಸ್ವಿಯಾಗಿ ನೆರವೇರಿತು. ಎರಡೂ ದಿನಗಳ ಕಾಲ ನಡೆದ ಸ್ನೇಹಮಿಲನ ಕಾರ್ಯಕ್ರಮವು ಕ್ರೀಡೆ,ಸಂಸ್ಕೃತಿ,ಸಂಗೀತ, ಸನ್ಮಾನ ಎಲ್ಲವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸಂಭ್ರಮದ ನೆನಪುಗಳನ್ನು ಮೂಡಿಸಿತು.
ನ.29ರಂದು ಹಿರಿಯ ವಿದ್ಯಾರ್ಥಿಗಳ “ಹಿರಿಯ ಜಾರ್ಜಿಯನ್ಸ್ ಕ್ರಿಕೆಟ್ ಟೂರ್ನಿ” ನೆಲ್ಯಾಡಿ ಗಾಂಧಿ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಫಾ.ಅನೀಶ್ ಪಾರಶೆರಿಲ್ ನೆರವೇರಿಸಿ ಶಿಕ್ಷಣ ಸಂಸ್ಥೆಯ ಗರ್ವವನ್ನು ಹೆಚ್ಚಿಸುವವರು ನಮ್ಮ ವಿದ್ಯಾರ್ಥಿಗಳು. ಇಂತಹ ಕ್ರೀಡಾ ಕೂಟಗಳು ಸ್ನೇಹ ಬಲಪಡಿಸುವುದರ ಜೊತೆಗೆ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತವೆ ಎಂದು ಹೇಳಿ ಆಟಗಾರರಿಗೆ ಶುಭ ಹಾರೈಸಿದರು. ವಿದ್ಯಾಸಂಸ್ಥೆಯ ಸಂಚಾಲಕ ಫಾ.ನೋಮಿಸ್ ಕುರಿಯ ಕೋಸ್ ಹಾಗೂ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗಿಸ್ ಉಪಸ್ಥಿತರಿದ್ದರು.
ಪೂರ್ವ ವಿದ್ಯಾರ್ಥಿಗಳ ಸುಮಾರು ಎಂಟು ತಂಡಗಳನ್ನು ರಚಿಸಿ ಕ್ರಿಕೆಟ್ ಪಂದ್ಯಾಟ ನಡೆಸಲಾಯಿತು. ಲೋಕೇಶ್ ಬಾಣಜಾಲು ಮತ್ತು ರಫೀಕ್ ಪ್ರಿಯದರ್ಶಿನಿ ಕ್ರಿಕೆಟ್ ಪಂದ್ಯಾಟದ ಸಂಯೋಜಕರಾಗಿ ಸಹಕರಿಸಿದರು.
ನ.30ರಂದು ಸಂಸ್ಥೆಯ ಸಭಾಂಗಣದಲ್ಲಿ ಪೂರ್ವ ವಿದ್ಯಾರ್ಥಿ ಸಂಘದ ಸ್ನೇಹ ಸಂಭ್ರಮ ನಡೆಯಿತು. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳಿ ಎಚ್ ಸಭಾಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು. ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗಿಸ್ ಮಾತನಾಡಿ, ಶಾಲೆಯ ಆರಂಭದ ದಿನಗಳಲ್ಲಿ ನಾವು ಕಂಡ ಕಷ್ಟ, ಸಂಕಷ್ಟಗಳ ನಡುವೆ ಶಿಸ್ತು ಹಾಗೂ ಒಗ್ಗಟ್ಟಿನಿಂದ ನಡೆದುಕೊಂಡ ವಿದ್ಯಾರ್ಥಿಗಳೇ ಇಂದು ನಮ್ಮ ಹೆಮ್ಮೆ. ನೀವು ಎಲ್ಲರೂ ನಿಮ್ಮ ಜೀವನದಲ್ಲಿ ಎತ್ತರಕ್ಕೆ ಏರಿದ್ದರೂ, ಈ ವಿದ್ಯಾಸಂಸ್ಥೆಯೊಂದಿಗೆ ನಿಮ್ಮ ಬಾಂಧವ್ಯ ಮತ್ತು ಹೊಣೆಗಾರಿಕೆ ಸದಾ ಜೀವಂತವಾಗಿರಬೇಕು ಎಂದು ಮನವಿ ಮಾಡಿದರು.

ಫಾ.ನೋಮಿಸ್ ಕುರಿಯ ಕೋಸ್ ಮಾತನಾಡಿ ಪೂರ್ವ ವಿದ್ಯಾರ್ಥಿಗಳೇ ಸಂಸ್ಥೆಯ ಶಕ್ತಿ ಮತ್ತು ಗುರುತಿನ ಪ್ರತೀಕ. ನಿಮ್ಮ ಯಶಸ್ಸು ನಮ್ಮ ಪ್ರೇರಣೆ. ಸಂಸ್ಥೆಯೊಂದಿಗೆ ಇರುವ ನಿಮ್ಮ ಬಾಂಧವ್ಯ ಎಂದಿಗೂ ಕಡಿದು ಹೋಗಬಾರದು ಎಂದರು. ವೇದಿಕೆಯಲ್ಲಿ ಪೂರ್ವ ವಿದ್ಯಾರ್ಥಿ ಪಿ.ಪಿ.ವರ್ಗಿಸ್, ಸಂಘದ ಕಾರ್ಯದರ್ಶಿ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ., ಕೋಶಾಧಿಕಾರಿ ಇಸ್ಮಾಯಿಲ್ ನೋಟರಿ ವಕೀಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಉಪನ್ಯಾಸಕ ಶೆಟ್ಟಿ ಕೆ. ಪ್ರಾರ್ಥಿಸಿದರು ಹಾಗೂ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಇಸ್ಮಾಯಿಲ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ:
ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಹಾಗೂ ನಿವೃತ್ತ ಪ್ರಿನ್ಸಿಪಾಲ್ ಅಬ್ರಹಾಂ ವರ್ಗಿಸ್ ದಂಪತಿಗಳನ್ನು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪೂರ್ವ ವಿದ್ಯಾರ್ಥಿ, ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ., ಪೂರ್ವ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಶಿವಣ್ಣ ಪಿ. ಹೆಗ್ಡೆ, ಕೋಶಾಧಿಕಾರಿ ಇಸ್ಮಾಯಿಲ್ ಅವರುಗಳನ್ನು ಪೂರ್ವ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ., ತಂಡದಿಂದ ಮನಮೋಹಕ ಸಂಗೀತ ಕಾರ್ಯಕ್ರಮ ನಡೆಯಿತು. ಪೂರ್ವ ವಿದ್ಯಾರ್ಥಿಗಳಿಗಾಗಿ ವಿವಿಧ ಮನರಂಜನಾ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ವಿಮಲ್ ಕುಮಾರ್ ಮತ್ತು ತೇಜಸ್ವಿ ಸ್ಪರ್ಧೆಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಏಲಿಯಾಸ್ ಎಂ.ಕೆ, ಕನ್ನಡ ಮಾಧ್ಯಮದ ಮುಖ್ಯಶಿಕ್ಷಕ ಎಂ.ವೈ.ತೋಮಸ್, ಆಂಗ್ಲ ಮಾಧ್ಯಮದ ಮುಖ್ಯಶಿಕ್ಷಕ ಹರಿಪ್ರಸಾದ್, ಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕರು, ಸಹಶಿಕ್ಷಕರು, ಪೂರ್ವವಿದ್ಯಾರ್ಥಿಗಳು ಉಪಸ್ಥಿತರಿದ್ದರು






