


ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಹಾಗೂ ನಿವೃತ್ತ ಪ್ರಾಚಾರ್ಯರಾದ ಅಬ್ರಹಾಂ ವರ್ಗೀಸ್ ಅವರ ಮೇಲೆ ಸಂಸ್ಥೆಯ ಆಡಳಿತ ಮಂಡಳಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿ, ಅವರನ್ನು ಕಾರ್ಯದರ್ಶಿಯಾಗಿ ಮರು ನೇಮಕ ಮಾಡಲಾಗಿದೆ.
ಧರ್ಮಾದ್ಯಕ್ಷರಾದ ವಂ.ಬಿಷಪ್ ಮಾರ್ಕೊಸ್ ಮಾರ್ ಕ್ರಿಸೆಷ್ಟೋಮೋಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ಮಹತ್ವದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಕಳೆದ 48 ವರ್ಷಗಳ ದೀರ್ಘ ಶೈಕ್ಷಣಿಕ ಸೇವಾ ಅನುಭವ, ಅಪಾರ ಜ್ಞಾನ ಹಾಗೂ ದೃಢ ಆಡಳಿತ ಸಾಮರ್ಥ್ಯ ಹೊಂದಿರುವ ಅಬ್ರಹಾಂ ವರ್ಗೀಸ್ ಅವರು ಸಂಸ್ಥೆಯ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ದೂರದೃಷ್ಟಿ ಮತ್ತು ಸಮರ್ಥ ನಾಯಕತ್ವದ ಫಲವಾಗಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆಗಳನ್ನು ದಾಖಲಿಸಿದೆ.
ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನಷ್ಟು ಉನ್ನತ ಮಟ್ಟಕ್ಕೆ ತಲುಪಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಬಿಷಪ್ ಮಾರ್ಕೊಸ್ ಮಾರ್ ಕ್ರಿಸೆಷ್ಟೋಮೋಸ್ ಅವರು, ಸುವರ್ಣ ಮಹೋತ್ಸವದತ್ತ ಸಾಗುತ್ತಿರುವ ಈ ಮಹತ್ವದ ಹಂತದಲ್ಲಿ ಅಬ್ರಹಾಂ ವರ್ಗೀಸ್ ಅವರ ಮರುನೇಮಕ ಸಂಸ್ಥೆಗೆ ಹೊಸ ಶಕ್ತಿ ಹಾಗೂ ಸ್ಪಷ್ಟ ದಿಕ್ಕು ನೀಡಲಿದೆ ಎಂದು ಹೇಳಿದರು.
ಪ್ರಸ್ತುತ ಸಂಸ್ಥೆ ಸುವರ್ಣ ಮಹೋತ್ಸವದತ್ತ ಸಾಗುತ್ತಿದ್ದು, ಇನ್ನೂ ಎರಡು ವರ್ಷಗಳಲ್ಲಿ ಈ ಮಹತ್ವದ ಮೈಲಿಗಲ್ಲು ತಲುಪಲಿದೆ. ಈ ಹಂತದಲ್ಲಿ ಅಬ್ರಹಾಂ ವರ್ಗೀಸ್ ಅವರ ಪುನರ್ ಆಗಮನ ಸಂಸ್ಥೆಗೆ ಹೊಸ ಶಕ್ತಿ ಹಾಗೂ ದಿಕ್ಕು ನೀಡಲಿದೆ ಎಂದು ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.






