ಮದ್ಯಪಾನವೇ ಬಡತನದ ಮೂಲ – ಶಾಸಕಿ ಭಾಗೀರಥಿ ಮುರುಳ್ಯ


ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ನೆಲ್ಯಾಡಿ–ಕೌಕ್ರಾಡಿ ಇವರ ಆಶ್ರಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಡಬ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಮತ್ತು ಕಡಬ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ–ಕೌಕ್ರಾಡಿ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ–ಉಜಿರೆ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ 2038ನೇ ಮದ್ಯವರ್ಜನ ಶಿಬಿರ ಮಂಗಳವಾರದಂದು ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಶಿಬಿರವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, “ದೇಶದಲ್ಲಿ ಬಡತನ ಹೆಚ್ಚಾಗಲು ಪ್ರಮುಖ ಕಾರಣ ಮದ್ಯಪಾನ. ಒಬ್ಬ ವ್ಯಕ್ತಿ ಮದ್ಯದ ವ್ಯಸನಕ್ಕೆ ಒಳಗಾದ ಮೇಲೆ ಅದರಿಂದ ಹೊರಬರುವುದು ಅತ್ಯಂತ ಕಷ್ಟದ ಕಾರ್ಯ. ಮದ್ಯಪಾನ ಬಿಡಲು ದೃಢ ಮನಸ್ಸು, ಆತ್ಮಸ್ಥೈರ್ಯ ಹಾಗೂ ಏಕಾಗ್ರತೆ ಅಗತ್ಯ. ಅಂಥ ಮನಪರಿವರ್ತನೆಯ ಮಹತ್ತರ ಕಾರ್ಯವನ್ನು ಧರ್ಮಸ್ಥಳ ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ನೆಲ್ಯಾಡಿಯಲ್ಲಿ ನಡೆಯುತ್ತಿರುವ ಈ ಶಿಬಿರದಿಂದ ಪರಿಸರದ ಮದ್ಯವ್ಯಸನಿಗಳು ಬದಲಾವಣೆಯಾಗಿ ತಮ್ಮ ಕುಟುಂಬಗಳ ಬದುಕು ಅಭಿವೃದ್ಧಿ ಹೊಂದಲಿ” ಎಂದು ಆಶಯ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದ.ಕ.ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಗಳು ಪೂಜ್ಯ ಹೆಗ್ಗಡೆಯವರ ಎರಡು ಕಣ್ಣುಗಳಂತಿವೆ. ಇವರ ಮಾರ್ಗದರ್ಶನದಲ್ಲಿ ಇದುವರೆಗೆ ಎರಡು ಲಕ್ಷಕ್ಕೂ ಅಧಿಕ ಮಂದಿ ದುಶ್ಚಟಗಳ ದಾಸ್ಯದಿಂದ ಮುಕ್ತರಾಗಿದ್ದಾರೆ. ಮದ್ಯಪಾನ ವ್ಯಸನದಿಂದ ವ್ಯಕ್ತಿಯಷ್ಟೇ ಅಲ್ಲ, ಇಡೀ ಕುಟುಂಬವೇ ಸರ್ವನಾಶವಾಗುತ್ತದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಡಬ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ. ಸವಣೂರು ವಕೀಲರು ಮಾತನಾಡಿ, “ಕಡಬ ತಾಲೂಕಿನಲ್ಲಿ ನಡೆಯುತ್ತಿರುವ ಇದು ಮೂರನೇ ಮದ್ಯವರ್ಜನ ಶಿಬಿರ. ಪೂಜ್ಯ ಖಾವಂದರ ದೂರದೃಷ್ಟಿಯಿಂದ ಆರಂಭವಾದ ಈ ಕಾರ್ಯಕ್ರಮ ಇಂದು ಅನೇಕ ಮನೆಗಳನ್ನು ಬೆಳಗಿಸಿದೆ. ಇಂಥ ಶಿಬಿರಗಳಿಗೆ ಮದ್ಯವ್ಯಸನಿಗಳನ್ನು ಸೇರಿಸಿ ಅವರಿಗೆ ಹೊಸ ಜೀವನದ ದಾರಿ ತೋರಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ” ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ದ.ಕ ಜಿಲ್ಲೆ ನಿರ್ದೇಶಕ ಬಾಬು ನಾಯ್ಕ ಎ., ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ–ಕೌಕ್ರಾಡಿ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮ್ಮನ್ನಾ ಜಬೀನ್, ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಶ್ರೀಧರ ಗೋರೆ, ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್, ದ.ಕ.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯ ಶಿವಪ್ರಸಾದ್ ಮೈಲೇರಿ, ಶಿಬಿರದ ವೈದ್ಯಾಧಿಕಾರಿ ಡಾ.ಮೋಹನದಾಸ್ ಗೌಡ, ನೋಣಯ್ಯ ಪೂಜಾರಿ, ಕುಶಾಲಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕಿನ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಒಕ್ಕೂಟಗಳ ಅಧ್ಯಕ್ಷರು–ಪದಾಧಿಕಾರಿಗಳು, ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಘಟಕ ಸಂಯೋಜಕಿ ನಮಿತಾ ಎಸ್. ಶೆಟ್ಟಿ ಪ್ರಾರ್ಥಿಸಿದರು. ಉಡುಪಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡಬ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಸ್ವಾಗತಿಸಿದರು. ರವಿಪ್ರಸಾದ್ ಮೇಲ್ವಿಚಾರಕರು ನಿರೂಪಿಸಿದರು. ನೆಲ್ಯಾಡಿ ಮೇಲ್ವಿಚಾರಕ ಆನಂದ ಡಿ.ಬಿ.ವಂದಿಸಿದರು.





