ಬೆಳ್ತಂಗಡಿಯಲ್ಲಿ ಬೆಚ್ಚಿಬೀಳುವ ಘಟನೆ – ಕಾಲೇಜು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಪರಿಚಿತರು ಕಿಡ್ನಾಪ್ ಮಾಡಲು ಯತ್ನ, ಚೂರಿಯಿಂದ ಗಾಯ ಮಾಡಿ ಪರಾರಿ

ಶೇರ್ ಮಾಡಿ

ಬೆಳ್ತಂಗಡಿ: ಬೆಳ್ತಂಗಡಿ ನಗರದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಲು ಮೂವರು ಅಪರಿಚಿತರು ಯತ್ನಿಸಿದ ಹೃದಯ ಹಿಂಡುವ ಘಟನೆ ಫೆ.9ರಂದು ಬೆಳಗ್ಗೆ ನಡೆದಿದೆ. ಸುದೇಮುಗೇರು ನಿವಾಸಿ ವಿದ್ಯಾರ್ಥಿನಿ ಎಂದಿನಂತೆ ಬೆಳಗ್ಗೆ ಸುಮಾರು 8:30 ಗಂಟೆಗೆ ಸಂತೆಕಟ್ಟೆ ಬಸ್ ಹಿಡಿಯಲೆಂದು ಸ್ಕೂಟರ್‌ನಲ್ಲಿ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ.

ಅಪರಿಚಿತ ನಂಬರ್ ಪ್ಲೇಟ್‌ಗೆ ಬಟ್ಟೆ ಕಟ್ಟಿದ ಶಂಕಾಸ್ಪದ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ವಿದ್ಯಾರ್ಥಿನಿ ಸಂಚರಿಸುತ್ತಿದ್ದ ಸ್ಕೂಟರ್‌ಗೆ ಅಡ್ಡಗಟ್ಟಿ, ಬಲವಂತವಾಗಿ ಕಾರಿನೊಳಕ್ಕೆ ಎಳೆಯಲು ಯತ್ನಿಸಿದ್ದಾರೆ. ವಿದ್ಯಾರ್ಥಿನಿ ಬೊಬ್ಬೆ ಹೊಡೆದು ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದ ಪರಿಣಾಮ ಆಕೆ ಕಾರಿನಿಂದ ಹೊರಬಂದು ತಪ್ಪಿಸಿಕೊಳ್ಳಲು ಸಮರ್ಥಳಾಗಿದ್ದಾಳೆ.

ಈ ವೇಳೆ ಕಾರಿನಲ್ಲಿದ್ದ ದುಷ್ಕರ್ಮಿಗಳಲ್ಲಿ ಒಬ್ಬನು ಚೂರಿಯಿಂದ ಬಾಲಕಿಯ ಕೈ ಹಾಗೂ ಬೆರಳಿಗೆ ಚುಚ್ಚಿದ್ದು, ನಂತರ ಕಾಲೇಜು ಬ್ಯಾಗ್‌ನ್ನು ಕಸಿದುಕೊಂಡು ಕಾರಿನೊಡನೆ ಪರಾರಿಯಾಗಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಗಾಯಗೊಂಡ ವಿದ್ಯಾರ್ಥಿನಿಯನ್ನು ತಕ್ಷಣ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದುಕೊಂಡು ಪ್ರಕರಣದ ತನಿಖೆಯನ್ನು ವೇಗಗೊಳಿಸಿದ್ದಾರೆ.

Leave a Reply

error: Content is protected !!