ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಫೆ9ರಂದು ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅವರು ಮಾತನಾಡಿ, “ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ನಿಜವಾದ ಆಸ್ತಿ; ವಿದ್ಯೆ ಪಡೆದು ಹೊರಟ ನಂತರವೂ ಗುರು–ಸಂಸ್ಥೆಯೊಂದಿಗೆ ಬಾಂಧವ್ಯ ಉಳಿಸಿಕೊಂಡರೆ ಸಂಸ್ಥೆಯ ಗೌರವ ಹೆಚ್ಚುತ್ತದೆ” ಎಂದು ಹೇಳಿದರು.

ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೋರ್ ಎಪಿಸ್ಕೋಪ ಪಿ.ಕೆ. ಅಬ್ರಹಾಂ ಅವರು ಬಾಲ್ಯದ ನೆನಪುಗಳನ್ನು ಹಂಚಿಕೊಂಡು, “ಪುಸ್ತಕಕ್ಕೆ ಸೀಮಿತವಲ್ಲದ ವಿದ್ಯೆ—ಮಾನವೀಯತೆ, ಪ್ರೀತಿ, ಕರುಣೆ, ದಯೆ ಇವುಗಳೇ ನಿಜವಾದ ಶಿಕ್ಷಣ. ಗುರುಗಳು ಶಿಲ್ಪಿಗಳಂತಿದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುತ್ತಾರೆ; ಗುರುಗಳಿಗೆ ಸಲ್ಲಿಸುವ ಗೌರವವೇ ನಿಜವಾದ ವಿದ್ಯೆ” ಎಂದು ಹೇಳಿದರು.

ಸಂಚಾಲಕ ಫಾ.ನೋಮಿಸ್ ಕುರಿಯಾಕೋಸ್ ಅವರು, “ವಿದ್ಯಾರ್ಥಿಗಳು ಭಾವನೆಗಳನ್ನೂ ಮೌಲ್ಯಗಳನ್ನೂ ಬೆಳೆಸಿ, ಕಲಿತ ವಿದ್ಯೆಯಿಂದ ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕು” ಎಂದು ಪ್ರೇರಣೆ ನೀಡಿದರು.

ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಏಲಿಯಾಸ್ ಎಂ.ಕೆ., ಪ್ರೌಢಶಾಲೆಯ ಮುಖ್ಯಶಿಕ್ಷಕ ತೋಮಸ್ ಎಂ.ಐ., ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಹರಿಪ್ರಸಾದ್ ಕೆ. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವಿದ್ಯಾರ್ಥಿಗಳಾದ ಜಸ್ಟಿನ್ ಜಾರ್ಜ್ ಜೋಸೆಫ್, ಸಿಮ್ರಾನ್ ಬಾನು, ಐಶ್ವರ್ಯ ಗೌಡ, ಕಾವ್ಯಶ್ರೀ, ಜೆಸ್ಲಿನ್ ಅನ್ನ ಜೋಸೆಫ್, ಸೈಯದ್ ಮುಸಾವಿರ್, ತೀರ್ಥನ್ ಕೆ. ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡರು. ಅನುಶ್ರೀ ಪಿ. ನಾಯರ್ ಮತ್ತು ದೀಕ್ಷಾ ಶೆಟ್ಟಿ ಪ್ರಾರ್ಥಿಸಿದರು. ಅಧ್ಯಾಪಕ ಕರುಣಾಕರ್ ಸ್ವಾಗತಿಸಿ, ಸಿಮಿ ಸಿ. ಜಾರ್ಜ್ ವಂದಿಸಿದರು.

ಕಾರ್ಯಕ್ರಮ ಸಂಯೋಜಕರಾದ ಗೀತಾ ಪಿ.ಬಿ., ಭವ್ಯ, ರಾಬಿಯ ಜೊತೆಗೆ ಉಪನ್ಯಾಸಕ–ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

error: Content is protected !!