





ಕೊಕ್ಕಡ: ಕೊಕ್ಕಡದ ಹುರುಳಿಮಜಲು ಕಾಂಪ್ಲೆಕ್ಸ್‌ನಲ್ಲಿ ‘ಡಿ.ಡಿ ಫ್ಯಾಶನ್’ ಒನ್ ಗ್ರಾಂ ಗೋಲ್ಡ್ ಜ್ಯುವೆಲರಿ ಶೋರೂಂ ಶುಕ್ರವಾರದಂದು ಅದ್ದೂರಿಯಾಗಿ ಉದ್ಘಾಟನೆಯಾಯಿತು.

ಈ ನೂತನ ಶೋರೂಂ ಅನ್ನು ಕೊಕ್ಕಡ, ಅರಸಿನಮಕ್ಕಿ ಹಾಗೂ ಶಿಶಿಲ ಆಟೋ ಚಾಲಕ–ಮಾಲಕರ ಸಂಘದ ಅಧ್ಯಕ್ಷರಾದ ಅಣ್ಣಿ ಗೌಡ, ಜಯರಾಮ ಶಿಶಿಲ ಹಾಗೂ ಶೇಖರ ಅರಸಿನಮಕ್ಕಿ ಅವರು ರಿಬ್ಬನ್ ಕತ್ತರಿಸಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕಿ ಸುಗುಣ ಶಿಶಿಲ ಅವರು, ಇಂದಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ಆಭರಣ ಪ್ರಿಯರಿಗೆ ಒನ್ ಗ್ರಾಂ ಗೋಲ್ಡ್ ಆಭರಣಗಳು ಉತ್ತಮ ಪರ್ಯಾಯವಾಗಿದ್ದು, ಈ ರೀತಿಯ ಶೋರೂಂಗಳು ಸಾಮಾನ್ಯ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಖ್ಯಾತ ವಕೀಲರಾದ ಮಂಜುನಾಥ ಅವರು ಮಾತನಾಡಿ, ಕೊಕ್ಕಡದಂತಹ ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಆಭರಣಗಳನ್ನು ಒದಗಿಸುವ ಉದ್ದೇಶದಿಂದ ಶೋರೂಂ ಆರಂಭಿಸಿರುವುದು ಶ್ಲಾಘನೀಯ ಕಾರ್ಯ. ಮುಂದಿನ ದಿನಗಳಲ್ಲಿ ಈ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಿ ಉತ್ತಮ ಸೇವೆಯನ್ನು ನೀಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರ ಮಾತೃಶ್ರೀ ಕಮಲ, ಶಿಶಿಲ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಸಂದೀಪ್, ಕೊಕ್ಕಡ, ಅರಸಿನಮಕ್ಕಿ ಹಾಗೂ ಶಿಶಿಲ ಭಾಗದ ಆಟೋ ಚಾಲಕರು, ಮಾಲಕರು ಹಾಗೂ ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಂಸ್ಥೆಯ ಮಾಲಕ ದಯಾನಂದ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಪ್ರಮೀಳಾ ಅವರು ಮಾತನಾಡಿ, ಗ್ರಾಹಕರ ಅಗತ್ಯತೆ ಹಾಗೂ ಆಧುನಿಕ ವಿನ್ಯಾಸಗಳಿಗೆ ತಕ್ಕಂತೆ ಒನ್ ಗ್ರಾಂ ಗೋಲ್ಡ್ ಆಭರಣಗಳು ಕೈಗೆಟುಕುವ ಬೆಲೆಯಲ್ಲಿ ಇಲ್ಲಿ ಲಭ್ಯವಿದ್ದು, ಬಾಡಿಗೆ ಹಾಗೂ ಮಾರಾಟದ ವ್ಯವಸ್ಥೆಯೂ ಇದೆ. ಅಲ್ಲದೆ ಮಾರಾಟವಾದ ಆಭರಣಗಳನ್ನು ಮರು ಖರೀದಿ ಮಾಡುವ ಒಪ್ಪಂದದೊಂದಿಗೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.





