ಕೊಕ್ಕಡ: ಜೋಡುಮಾರ್ಗ ಬಸ್ ನಿಲ್ದಾಣದಲ್ಲಿ ಕುಡುಕರು-ಭಿಕ್ಷುಕರ ಹಾವಳಿಗೆ ಕಡಿವಾಣ

ಶೇರ್ ಮಾಡಿ

 

ಕೊಕ್ಕಡ- ಜೋಡುಮಾರ್ಗ ಬಸ್ ನಿಲ್ದಾಣದಲ್ಲಿ ಕುಡುಕರು-ಭಿಕ್ಷುಕರ ಹಾವಳಿಗೆ ಕಡಿವಾಣ

ಕೊಕ್ಕಡ: ಜೋಡುಮಾರ್ಗ ಬಸ್ ನಿಲ್ದಾಣವು ಕುಡುಕರು, ಭಿಕ್ಷುಕರು ಹಾಗೂ ಅನಾಥರ ಅಡ್ಡೆಯಾಗಿ ಮಾರ್ಪಟ್ಟಿದ್ದು, ಕಸದ ರಾಶಿ, ಹೊಂಡ-ಗುಂಡಿಗಳ ನಡುವೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ವರದಿ ಪ್ರಕಟವಾದ ಬೆನ್ನಲ್ಲೇ ಸ್ಥಳೀಯ ಗ್ರಾಮ ಆಡಳಿತ ಎಚ್ಚೆತ್ತುಕೊಂಡು ಬಸ್ ನಿಲ್ದಾಣದ ವ್ಯವಸ್ಥೆ ಸುಧಾರಣೆಗೆ ತುರ್ತು ಕ್ರಮ ಕೈಗೊಂಡಿದೆ.

ಕಳೆದ ಹಲವು ತಿಂಗಳುಗಳಿಂದ ಬಸ್ ನಿಲ್ದಾಣದ ಒಳಭಾಗದಲ್ಲಿ ಕುಡುಕರು, ಭಿಕ್ಷುಕರು ಹಾಗೂ ಅನಾಥರು ರಾತ್ರಿ ವೇಳೆ ಆಶ್ರಯ ಪಡೆಯುತ್ತಿದ್ದು, ಇದರಿಂದ ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ಸಾರ್ವಜನಿಕ ಪ್ರಯಾಣಿಕರು ತೀವ್ರ ಮುಜುಗರ ಮತ್ತು ಆತಂಕದ ವಾತಾವರಣದಲ್ಲಿ ಸಂಚರಿಸಬೇಕಾಗಿತ್ತು. ರಾತ್ರಿ ವೇಳೆಯಲ್ಲಿ ಮದ್ಯಪಾನ ಮಾಡಿ ಗದ್ದಲ ಸೃಷ್ಟಿಸುವುದು, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರುವುದು ಹಾಗೂ ಬಸ್ ನಿಲ್ದಾಣದ ಆವರಣವನ್ನು ಅಸ್ವಚ್ಛಗೊಳಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂಬ ದೂರುಗಳು ಕೇಳಿಬಂದಿದ್ದವು.

ಗ್ರಾಮ ಪಂಚಾಯತ್ ಸಿಬ್ಬಂದಿಗಳು ರಾತ್ರಿಯ ಪಾಳಿಯಲ್ಲಿ ಕಾರ್ಯಾಚರಣೆ ನಡೆಸಿ ಬಸ್ ನಿಲ್ದಾಣದ ಒಳಭಾಗದಲ್ಲಿ ತಂಗಿದ್ದವರನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಇನ್ನು ಮುಂದೆ ಬಸ್ ನಿಲ್ದಾಣದಲ್ಲಿ ಕುಡುಕರು, ಭಿಕ್ಷುಕರು ಅಥವಾ ಅನಾಥರು ಕಂಡುಬಂದ ಕೂಡಲೇ 112/108 ತುರ್ತು ಪೊಲೀಸ್ ಸೇವೆಗೆ ಮಾಹಿತಿ ನೀಡುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಜೋಡುಮಾರ್ಗ ಬಸ್ ನಿಲ್ದಾಣದ ಸಮಸ್ಯೆಗಳ ಕುರಿತು ಪ್ರಕಟವಾದ ವರದಿಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸ್ವಚ್ಛ ವಾತಾವರಣ ಕಲ್ಪಿಸುವುದು ಪಂಚಾಯತ್‌ನ ಜವಾಬ್ದಾರಿಯಾಗಿದೆ. ಬಸ್ ನಿಲ್ದಾಣದಲ್ಲಿ ಕುಡುಕರು, ಭಿಕ್ಷುಕರು ಹಾಗೂ ಸಮಾಜಘಾತುಕ ಚಟುವಟಿಕೆಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನಿರಂತರ ನಿಗಾ ವಹಿಸಿ, ಬಸ್ ನಿಲ್ದಾಣದ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲಾಗುವುದು. ಸಾರ್ವಜನಿಕರು ಕೂಡ ಸಮಸ್ಯೆಗಳು ಕಂಡುಬಂದಲ್ಲಿ ಪಂಚಾಯತ್ ಗಮನಕ್ಕೆ ತರಬೇಕು.
-ಪರಮೇಶ್ವರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೊಕ್ಕಡ

 

Leave a Reply

error: Content is protected !!