ನೇಸರ ನ3: ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳ ಸ್ವಾಗತ ಮತ್ತು ದೀಪಾವಳಿ ಆಚರಣೆ ಕಾರ್ಯಕ್ರಮವು ಬಿಷಪ್ ಪೋಲಿಕಾರ್ಪೊಸ್ ಪಬ್ಲಿಕ್ ಸ್ಕೂಲ್ ಉದನೆಯಲ್ಲಿ ನಡೆಯಿತು. ಕೊರೋನ ಮಹಾಮಾರಿ ರೋಗದಿಂದಾಗಿ ಸುಮಾರು 1 ವರ್ಷ 8 ತಿಂಗಳುಗಳ ಕಾಲ ಶಾಲೆಗಳು ಮುಚ್ಚಿದ್ದವು. ಇದೀಗ ಶಾಲೆಗಳು ಆರಂಭಗೊಂಡಿದ್ದು, 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಶಾಲೆಯತ್ತ ಹೆಜ್ಜೆ ಇಟ್ಟಾಗ ಬ್ಯಾಂಡ್-ವಾದ್ಯಗಳೊಂದಿಗೆ ಬರಮಾಡಿಕೊಂಡು, ತಳಿರು ತೋರಣಗಳಿಂದ ಸಿಂಗಾರಗೊಂಡ ತರಗತಿ ಕೋಣೆಯೊಳಗೆ ಮಕ್ಕಳು ಪ್ರವೇಶಗೊಂಡರು. ಸಂಜೆ ಸಂಸ್ಥೆಯಲ್ಲಿ ದೀಪಾವಳಿ ಹಬ್ಬವನ್ನು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಹಣತೆ ಹಚ್ಚಿ, ಹಸಿರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿದ್ಯಾ ಸಂಸ್ಥೆಯ ಸಂಚಾಲಕ ರೆ.ಫಾ.ಹನಿ ಜೇಕಬ್ ದೀಪವನ್ನು ಬೆಳಗಿಸಿ ಎಲ್ಲರಿಗೂ ಶುಭಾಶಯವನ್ನು ಹಾರೈಸಿದರು. ಸೈಂಟ್ ಅಂಟನೀಸ್ ಪೌಢಶಾಲಾ ಮುಖ್ಯಶಿಕ್ಷಕ ಶ್ರೀಧರಗೌಡ ದೀಪಾವಳಿ ಹಬ್ಬದ ಆಚರಣೆಯ ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಬಿಷಪ್ ಪೋಲಿಕಾರ್ಪೊಸ್ ಪಬ್ಲಿಕ್ ಸ್ಕೂಲ್‍ನ ಮುಖ್ಯಶಿಕ್ಷಕ ಸಿಬಿಚನ್, ಆಡಳಿತಾಧಿಕಾರಿ ಜೋನ್ ಹಾಗೂ ಶಿಕ್ಷಕರು, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಬಳಿಕ ಎಲ್ಲರಿಗೂ ಸಿಹಿ ತಿಂಡಿ ವಿತರಿಸಲಾಯಿತು.