ನೇಸರ ಎ.13: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ಇಂದು ಬೆಳಗಿನ ಜಾವ ಒಂಟಿ ಸಲಗ ಕಂಡುಬಂದಿದೆ.
ಸಲಗವು ಪಾದಚಾರಿ ಒಬ್ಬರನ್ನು ಎತ್ತಿ ಬಿಸಾಕಿದೆ. ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು ಸಕಲೇಶಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾಡಾನೆ ತುಸು ಹೊತ್ತು ರಸ್ತೆಯಲ್ಲಿ ಇದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಯಿತು. ಶಿರಾಡಿ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಆಗಾಗ ಹಗಲಿನ ಹೊತ್ತು ಕೂಡ ಕಾಡಾನೆ ಕಂಡುಬರುತ್ತಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯವರು ಈ ರೀತಿ ದಾಳಿ ಇಡುತ್ತಿರುವ ಆನೆಗಳನ್ನು ಓಡಿಸುವುದಾರೂ ಎಲ್ಲಿಗೆ ಎಂಬ ಸಮಸ್ಯೆ ಎದುರಿಸುತ್ತ ದಿಕ್ಕು ತೋಚದ ಪರಿಸ್ಥಿತಿಯಲ್ಲಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಆನೆ ದಾಳಿಯ ಫೋಟೋ ಮತ್ತು ಕಾಡಾನೆಗಳ ಉಪಟಳ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿನಿತ್ಯ ಹರಿದಾಡುತ್ತಿರುವುದು ಸಾಮಾನ್ಯವಾಗಿದೆ. ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರೋಪಾಯ ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಭಾಗದ ಜನರು ಕೃಷಿ ಚಟುವಟಿಕೆ ತೊರೆಯುವುದರ ಜತೆಗೆ, ಬದುಕು ನಡೆಸುವುದೇ ದುಸ್ತರವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.
—ಜಾಹೀರಾತು—