ನೇಸರ ಮೇ 16: ಸ.ಪ್ರೌ.ಶಾಲೆ ಕೊಕ್ಕಡದಲ್ಲಿ ಗ್ರಾ.ಪಂ ಅಧ್ಯಕ್ಷ ಯೋಗೀಶ್ ಆಲಂಬಿಲ ರಿಬ್ಬನನ್ನು ಕತ್ತರಿಸುವುದರ ಮೂಲಕ ಶಾಲಾ ಆರಂಬೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿ ದೆಸೆಯಲ್ಲಿ ಮನಸ್ಸು ದ್ವಂದ್ವಯುತವಾಗಿರುತ್ತದೆ. ಇಂಥ ಸಮಯದಲ್ಲಿ ಕಲಿಕೆಯ ಬಗೆಗಿನ ಅಸಡ್ಡೆಯನ್ನು ಬಿಟ್ಟು ಶಿಕ್ಷಕರ ಮಾರ್ಗದರ್ಶನದಂತೆ ಮುನ್ನಡೆಯಬೇಕು. ಈ ಶೈಕ್ಷಣಿಕ ವರ್ಷವು ವಿದ್ಯಾರ್ಥಿಗಳ ಸಾಧನೆಯ ಪರ್ವಕಾಲವಾಗಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ್ತಿ ಸ್ವಾತಿ ಬಾಳ್ತಿಲ್ಲಾಯ ಮಾತನಾಡುತ್ತಾ ಪಾಠದ ಕಲಿಕೆಯ ಜೊತೆಗೆ ವಿದ್ಯಾರ್ಥಿಗಳು ಶಿಸ್ತಿನಿಂದ ಬದುಕುವುದು ಕೂಡಾ ಮುಖ್ಯ. ಸಾರ್ವಜನಿಕ ಜೀವನದಲ್ಲಿ ಒಬ್ಬ ವಿದ್ಯಾರ್ಥಿ ಅಶಿಸ್ತಿನಿಂದ ನಡೆದುಕೊಂಡರೆ ಅದು ಇಡೀ ಶಾಲೆಗೆ, ಗುರುಗಳಿಗೆ, ಊರಿಗೂ ಕೆಟ್ಟ ಹೆಸರು ತಂದುಕೊಳ್ಳುವಂತಾಗುತ್ತದೆ, ಹಿರಿಯರ ಮಾರ್ಗದರ್ಶನದಂತೆ ಇಡೀ ಊರಿಗೆ ಹೆಮ್ಮೆ ತರುವಂತೆ ಬದುಕಿ ಎಂದು ಹಾರೈಸಿದರು. ಕೊರೋನಾ ಕಾರಣದಿಂದ ಹಿಂದುಳಿದಿದ್ದ ಕಲಿಕೆಗಳು, ಕಲಿಕಾ ಚೇತರಿಕೆಯ ಮೂಲಕ ಸರಿಯಾಗುವಂತಾಗಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಗಿರಿಯಪ್ಪ ಆಲಂಬಿಲ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ್, ಉಪನ್ಯಾಸಕಿ ಜಲಜ, ಪೋಷಕರಾದ ಅಬೂಬಕ್ಕರ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕಿ ಬೀನಾ ಧನ್ಯವಾದವಿತ್ತರು. ಶಾಲಾ ಆರಂಭೋತ್ಸನ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೂ ನೀಡಿ, ಶಾಲಾ ಮುಖ್ಯದ್ವಾರರದಿಂದ ತರಗತಿಯವರೆಗೆ ವಿದ್ಯಾರ್ಥಿಗಳನ್ನು ಬ್ಯಾಂಡ್, ವಾಲಗದ ಮೂಲಕ ಬರಮಾಡಿಕೊಳ್ಳಲಾಯಿತು.
☸️ ಜಾಹೀರಾತು ☸️