ಜೈಲಿನಲ್ಲಿದ್ದಾಗಲೂ ಹೋರಾಟ, ಜೈಲಿನ ಹೊರಗಿದ್ದಾಗಲೂ ಹೋರಾಟಗೈದ ಅಪ್ರತಿಮ ಹೋರಾಟಗಾರ ವೀರ ಸಾವರ್ಕರ್: ಪೃಥ್ವೀಶ್ ಧರ್ಮಸ್ಥಳ

ಶೇರ್ ಮಾಡಿ

ನೇಸರ ಮೇ‌.29: “ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರು ದೇಶವನ್ನು ದಾಸ್ಯಮುಕ್ತಗೊಳಿಸಲು ಬ್ರಿಟಿಷರ ವಿರುದ್ಧ ಹೋರಾಟವನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಜೈಲಿಗೆ ಕಳುಹಲ್ಪಟ್ಟಾಗ ಅಲ್ಲಿ ತಾವು ಅನುಭವಿಸಿದ ಕ್ರೂರ ಶಿಕ್ಷೆಯ ನಡುವೆಯೂ, ಜೈಲಿನಲ್ಲಿ ನಡೆಯುತ್ತಿದ್ದ ಮತಾಂತರ, ಹಿಂದೂಗಳ ಮೇಲೆ ಎಸಗುತ್ತಿದ್ದ ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸಿದರು. ಸಮಾನತೆಗಾಗಿ ಹೋರಾಡಿ ಅಸ್ಪೃಶ್ಯತೆಯ ವಿರುದ್ಧ ದನಿಗೂಡಿಸಿದರು” ಎಂದು ಪೃಥ್ವೀಶ್ ಧರ್ಮಸ್ಥಳ ಇವರು ಹೇಳಿದರು. ಅವರು ಕಪಿಲ ಕೇಸರಿ ಯುವಕ ಮಂಡಲ, ಕುಂಟಾಲಪಳಿಕೆ ಇದರ ನೇತೃತ್ವದಲ್ಲಿ ಕುಂಟಾಲಪಳಿಕೆಯಲ್ಲಿ ಜರುಗಿದ ವೀರಸಾವರ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಹಿಂದುತ್ವದ ಶಕ್ತಿಯಾಗಿದ್ದ ವೀರ ಸಾವರ್ಕರ್ ಅವರ ಸಾಧನೆಯನ್ನು ಹಿಂದಿನ ಇತಿಹಾಸಕಾರರು ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟು ಹಿಂದೂ ಧರ್ಮೀಯರನ್ನು ಹಾದಿ ತಪ್ಪುವಂತೆ ಮಾಡಿದ್ದಾರೆ. ಇಂದಿನ ಯುವ ಪೀಳಿಗೆ, ಮಕ್ಕಳು ವೀರ ಸಾವರ್ಕರ್ ರವರ ಹೋರಾಟ, ತ್ಯಾಗ, ಬಲಿದಾನಗಳ ಬಗ್ಗೆ ಓದುವುದು ಅತ್ಯಗತ್ಯವಾಗಿದೆ ಎಂಬ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಕಪಿಲ ಕೇಸರಿ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಗೌಡ ಬೊಳ್ಳೋಡಿ ಮಾತನಾಡಿ, “ಶಾಲಾ ಪಠ್ಯದಲ್ಲಿನ ಇತಿಹಾಸದಲ್ಲಿ ಮೂಲೆಗುಂಪಾಗಿರುವ ವೀರ ಸಾವರ್ಕರ್ ರವರ ಬಲಿದಾನಗಳು ಎಲ್ಲರಿಗೂ ಮಾದರಿಯಾಗಿವೆ” ಎಂದರು.
ಈ ಕಾರ್ಯಕ್ರಮಕ್ಕೆ ಮಿತ್ರ ಸಂಘಟನೆಗಳಾದ ಶಿವಶಕ್ತಿ ಫ್ರೆಂಡ್ಸ್, ಕಳೆಂಜ, ವಿಶ್ವಹಿಂದೂ ಪರಿಷತ್ ಭಜರಂಗದಳ ಅರಸಿನಮಕ್ಕಿ ಘಟಕ ಮತ್ತು ಶಿವಾಜಿ ಗ್ರೂಪ್ ಆಫ್ ಬಾಯ್ಸ್, ಕೊಕ್ಕಡ ಸಹಕರಿಸಿದರು. ಭಜರಂಗದಳ ತಾಲೂಕು ಮುಖಂಡರಾದ ಅಖಿಲ್ ರೆಖ್ಯ, ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ ಇದರ ಮಾಜಿ ಅಧ್ಯಕ್ಷರಾದ ಜನಾರ್ದನ ಕೆ.ಪಿ. ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಾದ ಆದಿತ್ಯ, ಅಭಿಲಾಷ್, ಮಧುರ್ ಖರೆ ಪ್ರಾರ್ಥಿಸಿದರು. ಶ್ರೀವತ್ಸ ಗೋಖಲೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುದರ್ಶನ ಆಚಾರ್ಯ ಸ್ವಾಗತಿಸಿ, ಪ್ರಸನ್ನ ನಾಯ್ಕ ವಂದಿಸಿದರು. ಕಾರ್ಯದರ್ಶಿ ಸುಮಂತ್ ಗೌಡ ಅಳಕ್ಕೆ ಕಾರ್ಯಕ್ರಮ ನಿರೂಪಿಸಿದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

 

Leave a Reply

error: Content is protected !!