
ನೇಸರ ಜೂ.08: ವಿಶ್ವ ಪರಿಸರ ದಿನಾಚರಣೆ ಯನ್ನು ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ಮತ್ತು ಅನಿಕೇತನ ಎಜುಕೇಶನ್ ಟ್ರಸ್ಟ್ ಪುತ್ತೂರು ಆಶ್ರಯದಲ್ಲಿ ಜೇಸಿಐ ಉಪ್ಪಿನಂಗಡಿ ಘಟಕದ ಉಪಸ್ಥಿತಿಯಲ್ಲಿ ಕುಳ್ಳಾಜೆ ಈಶ್ವರ ನಾಯಕ್ ಮನೆಯಲ್ಲಿ ಆಯೋಜಿಸ ಲಾಗಿತ್ತು.

ಪ್ರಗತಿಪರ ಕೃಷಿಕ ಹಿರಿಯರಾದ ನಟ್ಟಿ ಈಶ್ವರ ನಾಯಕ್ ಕುಳ್ಳಾಜೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ ವಿಶ್ವ ಪರಿಸರ ದಿನ ಪರಿಸರಕ್ಕೆ ಸಂತಸ ಸಂಭ್ರಮದ ದಿನ ಆಗಿದೆ. ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭವಾಗಲಿ ಎಂದರು. ವಿವೇಕಾನಂದ ಪದವಿ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಈಶ್ವರ ಪ್ರಸಾದ್ ಉಪನ್ಯಾಸ ನೀಡಿ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಅತ್ಯಂತ ಮುಖ್ಯ ಜವಾಬ್ದಾರಿಗಳಲ್ಲೊಂದು. ನೈಸರ್ಗಿಕ ಪರಿಸರವನ್ನು ನಾವು ರಕ್ಷಿಸದೇ ಹೋದರೆ ಭೂಮಿತಾಯಿಗೆ ದ್ರೋಹವೆಸಗಿದಂತಾಗುತ್ತದೆ. ಶಿಕ್ಷಣದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಆದ್ಯತೆ ನೀಡಿ ವಿದ್ಯಾರ್ಥಿಗಳು ಕಲಿಯಬೇಕಾಗಿದೆ ಎಂದರು. ಅನಿಕೇತನ ಎಜುಕೇಶನ್ ಟ್ರಸ್ಟ್ ಮ್ಯಾನೇಜಿಂಗ್ ಡೈರೆಕ್ಟರ್ ಜೇಸಿ ಕೃಷ್ಣಪ್ರಸಾದ್ ಮಾತನಾಡಿ, ಇಂದಿನ ಜಗತ್ತಿನ ಅತಿವೇಗದ ಬೆಳವಣಿಗೆಯಲ್ಲಿ, ನಾವು ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದು, ನೈಸರ್ಗಿಕ ಪರಿಸರಕ್ಕೆ ಅಭಿವೃದ್ಧಿಯೇ ಮಾರಕವೆನಿಸುವ ಮಟ್ಟಕ್ಕೆ ಜಾಗತಿಕವಾಗಿ ಮಾಲಿನ್ಯಸಮಸ್ಯೆ ಎದುರಾಗಿದೆ. ಹಲವಾರು ಪ್ರಭೇದಗಳ ಪ್ರಾಣಿಪಕ್ಷಿ ಮತ್ತು ಸಸ್ಯ ಸಂಪತ್ತು ವಿನಾಶದ ಅಂಚಿನಲ್ಲಿವೆ. ನೈಸರ್ಗಿಕ ಸಮತೋಲನ ಕಾಪಾಡದೇ ಇದ್ದಲ್ಲಿ, ಮುಂದೊಂದು ದಿನ ಭೂಮಿ ಅತಿದೊಡ್ಡ ನೈಸರ್ಗಿಕ ದುರಂತವನ್ನು ಎದುರಿಸಬೇಕಾಗುತ್ತದೆಂದರು. ಜೇಸಿಐ ಘಟಕಾಧ್ಯಕ್ಷ ಜೇಸಿ ಮೋಹನಚಂದ್ರ ತೋಟದ ಮನೆ “ಅರಣ್ಯ ಬೆಳೆಸುವ ಪ್ರಕೃತಿ ಉಳಿಸೋಣ” ಕುರಿತು ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಈಶ್ವರ ನಾಯಕ್ ಕುಳ್ಳಾಜೆ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಗುರುಗಳಾದ ಶ್ರೀ ಸೂರ್ಯಪ್ರಕಾಶ ವಹಿಸಿದ್ದರು.ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ವಿವಿಧ ಪ್ರಭೇದದ ಸಸ್ಯಗಳ ಬಗ್ಗೆ ಮಾಹಿತಿಯನ್ನು ಸುಪ್ರೀತಾ ಕುಳ್ಳಾಜೆ ನೀಡಿದರು. ಪ್ರಗತಿಪರ ಕೃಷಿಕ, ಮೂಲಚಂದ್ರ ಜೇನು ಸಾಕಣಿಕೆಯ ಬಗ್ಗೆ ಪ್ರಾಯೋಗಿಕ ಕಾರ್ಯಾಗಾರ ನಡೆಸಿಕೊಟ್ಟರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಕುಳ್ಳಾಜೆ ವೇಣುಗೋಪಾಲ ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಆಂಗ್ಲಭಾಷೆ ಶಿಕ್ಷಕ ಜ್ಞಾನೇಶ್ ವಂದಿಸಿದರು. ಶಾಲಾ ಶಿಕ್ಷಕರು, ಶಿಕ್ಷಕೇತರ ವರ್ಗದವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕುಳ್ಳಾಜೆ ಕುಟುಂಬಸ್ಥರು ವಿವಿಧ ರೀತಿಯ ಪದಾರ್ಥಗಳು, ಸಿಹಿತಿಂಡಿಗಳು ಒಳಗೊಂಡಂತೆ ಉಪಾಹಾರ, ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಸಂಘ ಸಂಸ್ಥೆಯ ಸದಸ್ಯರು, ಬಂಧುಬಳಗದವರು ಸೇರಿದಂತೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಜಾಹೀರಾತು






