






ಅರಸಿನಮಕ್ಕಿ: ಗ್ರಾಮೀಣ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಹಾಗೂ ಅವರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಅರಸಿನಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿವಾನಿ ಸಂಜೀವಿನಿ ಒಕ್ಕೂಟದ 34ನೇ ಸ್ವಸಹಾಯ ಸಂಘವನ್ನು ಶುಕ್ರವಾರ ಉದ್ಘಾಟಿಸಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ ಅವರು ನೂತನ ಸ್ವಸಹಾಯ ಸಂಘವನ್ನು ಉದ್ಘಾಟಿಸಿ, ಸಂಘದ ಸದಸ್ಯರಿಗೆ ಶುಭ ಹಾರೈಸಿದರು. ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದರೊಂದಿಗೆ ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುವತ್ತ ಗಮನಹರಿಸಬೇಕು ಎಂಬ ಆಶಯದೊಂದಿಗೆ ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಎಂಬಿಕೆ ನೀತಾ ಅವರು ಸ್ವಸಹಾಯ ಸಂಘದ ಉದ್ದೇಶ, ಕಾರ್ಯವೈಖರಿ ಹಾಗೂ ಸಂಘದ ಸದಸ್ಯರು ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಸ್ವಸಹಾಯ ಸಂಘಗಳು ಮಹಿಳೆಯರಲ್ಲಿ ಉಳಿತಾಯದ ಮನೋಭಾವ ಬೆಳೆಸುವುದರ ಜೊತೆಗೆ ಪರಸ್ಪರ ಸಹಕಾರ, ಸಂಘಟನಾ ಶಕ್ತಿ ಮತ್ತು ಸ್ವಾವಲಂಬನೆಯ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಲ್ಸಿಆರ್ಪಿ ಅಮಿತಾ, ಬಿಸಿ ಸಖಿ ರೇವತಿ, ಸಂಜೀವಿನಿ ಒಕ್ಕೂಟದ ವಿವಿಧ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.








































































































