250ಕ್ಕೂ ಅಧಿಕ ಮಳಿಗೆಗಳು, ಕೃಷಿ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಉತ್ಸವ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ
ಕಡಬ: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹೊಸಮಠದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜ.1, 2 ಮತ್ತು 3ರಂದು ರಾಜ್ಯಮಟ್ಟದ ಒಕ್ಕಲಿಗ ಕೃಷಿ ಉತ್ಸವ–2027 ನಡೆಯಲಿದೆ ಎಂದು ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ತಿಳಿಸಿದ್ದಾರೆ.
ಬುಧವಾರ ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ನಡೆಯುವ ಕೃಷಿ ಉತ್ಸವವು ಎಲ್ಲಾ ಜಾತಿ, ಧರ್ಮದವರ ಪಾಲ್ಗೊಳ್ಳುವಿಕೆಯಿಂದ ಜಾತ್ಯತೀತವಾಗಿ ನಡೆಯುವ ಕಾರ್ಯಕ್ರಮವಾಗಿದ್ದು, ಕೃಷಿ, ವಾಣಿಜ್ಯ, ಶೈಕ್ಷಣಿಕ ಹಾಗೂ ವಿಜ್ಞಾನ ಮಳಿಗೆಗಳು ಸೇರಿದಂತೆ 250ಕ್ಕೂ ಅಧಿಕ ಮಳಿಗೆಗಳು ಉತ್ಸವದಲ್ಲಿ ಇರಲಿವೆ ಎಂದರು.
ಆಹಾರ ಉತ್ಸವದಲ್ಲಿ 100ಕ್ಕೂ ಅಧಿಕ ಸ್ಟಾಲ್ಗಳಿದ್ದು, ಶುದ್ಧ ಸಸ್ಯಾಹಾರ ಹಾಗೂ ಮಾಂಸಾಹಾರಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಕೃಷಿ ಕ್ಷೇತ್ರದ ತಜ್ಞರಿಂದ ವಿಚಾರಗೋಷ್ಠಿಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹೊಸಮಠ ನದಿಯಲ್ಲಿ ಬೋಟಿಂಗ್, ನದಿಯ ಮಧ್ಯದಲ್ಲಿ ಸೆಲ್ಫಿ ಪಾಯಿಂಟ್, ಬೃಹತ್ ಜಾಯಿಂಟ್ ವೀಲ್, ಹಾರುವ ದೋಣಿ, ಮಕ್ಕಳಿಗಾಗಿ ಪ್ರತ್ಯೇಕ ಮನೋರಂಜನಾ ಆಟಗಳು ಸೇರಿದಂತೆ ವಿವಿಧ ಆಕರ್ಷಣೆಗಳನ್ನು ಏರ್ಪಡಿಸಲಾಗಿದ್ದು, ಉತ್ಸವವನ್ನು ಜಾತ್ರೋತ್ಸವದ ಮಾದರಿಯಲ್ಲಿ ಆಯೋಜಿಸಲಾಗುವುದು ಎಂದು ವಿವರಿಸಿದರು.
ಜ.1ರಂದು ಕೃಷಿ ಹಸಿರುವಾಣಿ ಮೆರವಣಿಗ ಜ.1ರಂದು ಬೆಳಗ್ಗೆ ಕಡಬ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಿಂದ ಕೃಷಿ ಹಸಿರುವಾಣಿ ಮೆರವಣಿಗೆ ಹೊರಟು ಹೊಸಮಠದಲ್ಲಿ ಸಮರ್ಪಣೆಯಾಗಲಿದೆ. ಬಳಿಕ ಗಣ್ಯರಿಂದ ಉತ್ಸವದ ಮಹಾದ್ವಾರ ಹಾಗೂ ವಿವಿಧ ಮಳಿಗೆಗಳ ಉದ್ಘಾಟನೆ ನೆರವೇರಲಿದ್ದು, ಕೃಷಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಪರಾಹ್ನ ಕೃಷಿ ವಿಚಾರಗೋಷ್ಠಿ ನಡೆಯಲಿದೆ.
ಸಂಜೆ ಸಾಂಸ್ಕೃತಿಕ ಸ್ಪರ್ಧೆಗಳ ಪ್ರದರ್ಶನ ಹಾಗೂ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ನಟಿ ಮಾನಸಿ ಸುಧೀರ್ ಮತ್ತು ತಂಡದವರಿಂದ ‘ನಾರಸಿಂಹ – ಒಳಿತಿನ ವಿಜಯದ ಕಥನ’ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.
ಜ.2ರಂದು ಚುರುಮುರಿ ರಾತ್ರಿ ಜ.2ರಂದು ಬೆಳಗ್ಗೆ ವಿಜ್ಞಾನಿಗಳು ಹಾಗೂ ಕೃಷಿ ತಜ್ಞರಿಂದ ಕೃಷಿ ವಿಚಾರಗೋಷ್ಠಿ ನಡೆಯಲಿದ್ದು, ಬಳಿಕ ಸಾಂಸ್ಕೃತಿಕ ಸ್ಪರ್ಧೆಗಳ ಪ್ರದರ್ಶನ ಇರಲಿದೆ. ಸಂಜೆ ‘ಚುರುಮುರಿ ರಾತ್ರಿ’ ಹಾಸ್ಯ, ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ.
ನಿರೂಪಕ ಹರ್ಷಿತ್ ಮರ್ಕಂಜ ಅವರ ನಿರೂಪಣೆಯಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಖ್ಯಾತಿಯ ಬೇಬಿ ಜ್ಞಾನ ಗುರುರಾಜ್, ಸರಿಗಮಪ ಖ್ಯಾತಿಯ ಪ್ರಜ್ಞ ಮರಾಠೆ, ಗಾಯಕಿ ಪಲ್ಲವಿ ಪ್ರಭು ಹಾಗೂ ಸರಿಗಮಪ ಖ್ಯಾತಿಯ ಅಚಿಂತ್ಯ ರೈ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಲೆ ತೆಲಿಪಾಲೆ ತಂಡದಿಂದ ಹಾಸ್ಯ ಪ್ರದರ್ಶನ ಹಾಗೂ ಸುಧೀರ್ ಸಿಟಿ ಗೈಸ್ ತಂಡದಿಂದ ನೃತ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಲಿದೆ.
ಜ.3ರಂದು ರಾಜ್ಯಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ ಜ.3ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕೃಷಿ ವಿಚಾರಗೋಷ್ಠಿಗಳು ನಡೆಯಲಿದ್ದು, ಕೃಷಿ ತಜ್ಞರಿಂದ ರೈತರಿಗೆ ಮಾಹಿತಿ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಅಪರಾಹ್ನ ಸಮಾರೋಪ ಸಮಾರಂಭ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಆಹ್ವಾನಿತ ತಂಡಗಳ ನಡುವೆ ರಾಜ್ಯಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ ಆಯೋಜಿಸಲಾಗಿದ್ದು, ರಾತ್ರಿ ಕಲಾಕುಂಚ ಕಲಾವಿದರು ಕುಲಾಂಬ ಇವರಿಂದ ‘ಪರಮಾತ್ಮೆ ಪಂಜುರ್ಲಿ’ ತುಳು ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿ, ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ರಾಜ್ಯಮಟ್ಟದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸುರೇಶ್ ಬೈಲು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಕಡಬ ವಲಯಾಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ, ಯುವ ಘಟಕದ ಅಧ್ಯಕ್ಷ ಬಿ.ಎಂ. ಪೂರ್ಣೇಶ್ ಗೌಡ ಬಾಬ್ಲುಬೆಟ್ಟು, ಒಕ್ಕಲಿಗ ಮುಖಂಡರಾದ ಜನಾರ್ಧನ ಗೌಡ ಪಣೆಮಜಲು, ಕುಶಾಲಪ್ಪ ಗೌಡ ಅನಿಲ, ನೀಲಾವತಿ ಶಿವರಾಮ್ ಹಾಗೂ ಎ.ಪಿ. ಗಿರೀಶ್ ಉಪಸ್ಥಿತರಿದ್ದರು.
ರೈತರ ಹೋರಾಟಕ್ಕೆ ಒಕ್ಕಲಿಗ ಗೌಡ ಸೇವಾ ಸಂಘ ಬೆಂಬಲ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಬೆಳೆ ವಿಮೆಯಲ್ಲಿ ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ನ.30ರಂದು ಕಡಬ ತಾಲೂಕು ಕಚೇರಿ ಬಳಿ ನಡೆಯಲಿರುವ ‘ಬೆಳೆ ವಿಮೆ ಬರುವ ತನಕ’ ಬೃಹತ್ ಪ್ರತಿಭಟನೆಗೆ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಸಂಪೂರ್ಣ ಬೆಂಬಲ ನೀಡಲಿದೆ. ರೈತರ ನ್ಯಾಯಯುತ ಬೇಡಿಕೆಗಳಿಗಾಗಿ ನಡೆಯುವ ಹೋರಾಟ ಯಶಸ್ವಿಯಾಗಲಿ ಎಂದು ಸಂಘದ ಅಧ್ಯಕ್ಷ ಸುರೇಶ್ ಬೈಲು ಹೇಳಿದರು.