


ಕೊಕ್ಕಡ: ಪುದುವೆಟ್ಟು ಗ್ರಾಮದ ಖಂಡಿಗ ಎಂಬಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ.
ಮಿಯಾರು ಕಡೆಯಿಂದ ಉಜಿರೆ ಕಡೆಗೆ ದೀಪಾ ಅವರು ತಮ್ಮ 12 ವರ್ಷದ ಪುತ್ರನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ, ಖಂಡಿಗದ ತಿರುವಿನಲ್ಲಿ ಬೊಲ್ಮನಾರು ಕಡೆಯಿಂದ ಮಿಯಾರು ಕಡೆಗೆ ಬರುತ್ತಿದ್ದ ಪ್ರಶಾಂತ್ (37) ಅವರು ಚಲಾಯಿಸುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ದ್ವಿಚಕ್ರ ವಾಹನಗಳು ರಸ್ತೆಯ ಬದಿಗೆ ಮಗುಚಿ ಬಿದ್ದಿವೆ. ಘಟನೆಯಲ್ಲಿ ದೀಪಾ, ಅವರ ಪುತ್ರ ಹಾಗೂ ಪ್ರಶಾಂತ್ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣ ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ವೈದ್ಯರ ಸಲಹೆಯಂತೆ ದೀಪಾ ಅವರ ಪುತ್ರನನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಹಾಗೂ ಪ್ರಶಾಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








































































































