


ಪುತ್ತೂರು: ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರ ಸೇರಿದಂತೆ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಗ್ರಾಮೀಣ ಭಾಗದ ಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕಾವು ನವೋದಯ ಒಕ್ಕೂಟಕ್ಕೆ ಪ್ರತಿಷ್ಠಿತ ‘ಶ್ರೀ ವಿಷ್ಣು ಯುವಸಿರಿ’ ಸಾಂಘಿಕ ಪ್ರಶಸ್ತಿ ಲಭಿಸಿದೆ.
ಮಜ್ಜಾರಡ್ಕ ಶ್ರೀ ವಿಷ್ಣು ಯುವ ಬಳಗದ ವತಿಯಿಂದ ನ.1ರಂದು ಆಯೋಜಿಸಲಾಗಿದ್ದ ‘ಕೆಸರಡೊಂಜಿ ದಿನ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾವು ನವೋದಯ ಒಕ್ಕೂಟವು ಗ್ರಾಮೀಣ ಜನರ ಅಭಿವೃದ್ಧಿ ಹಾಗೂ ಸಾಮಾಜಿಕ ಜಾಗೃತಿಗಾಗಿ ಹಲವು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಒಕ್ಕೂಟದ ಸರ್ವ ಸದಸ್ಯರ ಪರವಾಗಿ ಅಧ್ಯಕ್ಷ ಸುಬ್ರಾಯ ಗೌಡ, ಕಾರ್ಯದರ್ಶಿ ರೇವತಿ ಸಿ.ಎನ್., ಅಮ್ಮುಪೂಂಜ ಪಳನೀರು, ನಿಕಟಪೂರ್ವ ಪದಾಧಿಕಾರಿಗಳಾದ ನಿರ್ಮಲಾ ರೈ ಮದ್ಲ, ಪ್ರೇರಕರಾದ ಗಾಯತ್ರಿ, ಸುಮತಿ ಆಚಾರಿಮೂಲೆ, ಕೇಶವ ಸಸ್ಪೆಟ್ಟಿ, ಇಬ್ರಾಹಿಂ ಆಶ್ವತ್ತಡಿ ಹಾಗೂ ನಿಕಟಪೂರ್ವ ಅಧ್ಯಕ್ಷ ಚಿದಾನಂದ ಆಚಾರ್ಯ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.








































































































