





ನೆಲ್ಯಾಡಿ: ಐತಿಹಾಸಿಕ ದಸರಾ ಹಬ್ಬದ ಪೂಜೆ ಹಾಗೂ ಮೆರವಣಿಗೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮಕ್ಕಳ ಅನುಕೂಲಕ್ಕಾಗಿ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ದಸರಾ ರಜೆಯನ್ನು ಅ.22ರವರೆಗೆ ಒಂದು ದಿನ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಅ.21ರಂದು ಈ ಕುರಿತು ಅಧಿಕೃತ ಜ್ಞಾಪನ ಆದೇಶ ಹೊರಡಿಸಲಾಗಿದೆ. ಅ.21ರಂದು ಐತಿಹಾಸಿಕ ದಸರಾ ಹಬ್ಬದ ಪೂಜೆ ಹಾಗೂ ಮೆರವಣಿಗೆಯ ಅಂತಿಮ ದಿನವಾಗಿದ್ದು, ರಾತ್ರಿ ವೇಳೆಯೂ ಪೂಜೆ ಮತ್ತು ಮೆರವಣಿಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಮಕ್ಕಳು ಹಾಗೂ ಅವರ ಪೋಷಕರು ಭಾಗವಹಿಸಲಿದ್ದಾರೆ. ಅಲ್ಲದೆ, ದೂರದ ಜಿಲ್ಲೆಗಳಿಂದ ಬಂದಿರುವ ಮಕ್ಕಳು ಮತ್ತು ಪೋಷಕರು ತಮ್ಮ ಊರುಗಳಿಗೆ ಮರಳಲು ವಿಳಂಬವಾಗುವ ಸಾಧ್ಯತೆಯಿದೆ. ಹೀಗಾಗಿ ಮರುದಿನವಾದ ಅ.22ರಂದು ಶಾಲೆಗಳು ಪುನರಾರಂಭಗೊಂಡರೆ ಮಕ್ಕಳು ಶಾಲೆಗೆ ಹಾಜರಾಗಲು ತೊಂದರೆಯಾಗಬಹುದು ಎಂಬ ಮನವಿಯನ್ನು ಪೋಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ದೂರವಾಣಿ ಕರೆಗಳ ಮೂಲಕ ಇಲಾಖೆಗೆ ಸಲ್ಲಿಸಿದ್ದರು.
ಈ ಮನವಿಯನ್ನು ಪರಿಶೀಲಿಸಿದ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಈಗಾಗಲೇ ಅ.3ರಿಂದ 21ರವರೆಗೆ ಘೋಷಿಸಲಾಗಿದ್ದ ದಸರಾ ರಜೆಯನ್ನು ಅ.22ರವರೆಗೆ ವಿಸ್ತರಿಸಲು ನಿರ್ಧರಿಸಿದೆ.
ಸ್ಥಳೀಯ ರಜೆಯಲ್ಲಿ ಒಂದು ದಿನ ಬಳಸಿ ಸರಿದೂಗಿಸಲು ಸೂಚನೆ
ಹೆಚ್ಚುವರಿಯಾಗಿ ಘೋಷಿಸಲಾದ ಒಂದು ದಿನದ ರಜೆಯಿಂದ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಶಾಲೆಗಳಿಗೆ ನೀಡಲಾಗಿರುವ ಮುಖ್ಯ ಶಿಕ್ಷಕರ ವಿವೇಚನೆಯಲ್ಲಿರುವ ನಾಲ್ಕು ಸ್ಥಳೀಯ ರಜೆಗಳ ಪೈಕಿ ಒಂದು ಸ್ಥಳೀಯ ರಜೆಯನ್ನು ಬಳಸಿಕೊಂಡು ಈ ಹೆಚ್ಚುವರಿ ರಜೆಯನ್ನು ಸರಿದೂಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲೆಯ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳ ಮುಖ್ಯ ಶಿಕ್ಷಕರಿಗೆ ಈ ಆದೇಶವನ್ನು ತಲುಪಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳ ಹಾಗೂ ಪೋಷಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ರಜೆ ವಿಸ್ತರಿಸಿರುವುದರಿಂದ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಅ.22ರಂದು ಕೂಡ ರಜೆ ಇರಲಿದೆ. ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಒಂದು ಸ್ಥಳೀಯ ರಜೆಯನ್ನು ಬಳಸಿಕೊಂಡು ದಿನವನ್ನು ಸರಿದೂಗಿಸುವ ಜವಾಬ್ದಾರಿಯನ್ನು ಶಾಲಾ ಮುಖ್ಯ ಶಿಕ್ಷಕರಿಗೆ ವಹಿಸಲಾಗಿದೆ.








































































































