ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಖಾತೆಗೆ ಹಣ ಪಾವತಿಸುವ ತನಕ ನಿರಂತರ ಹೋರಾಟ: ಕಿಶೋರ್ ಶಿರಾಡಿ
ಕಡಬ: ವಿಮಾ ಕಂತುಗಳನ್ನು ಪ್ರಾಮಾಣಿಕವಾಗಿ ಪಾವತಿಸಿದ ರೈತರಿಗೆ ಬೆಳೆ ವಿಮೆಯ ಹಣ ದೊರೆಯದ ಹಿನ್ನೆಲೆಯಲ್ಲಿ, ರೈತರಿಗೆ ನ್ಯಾಯಯುತ ಪರಿಹಾರ ನೀಡುವಂತೆ ಆಗ್ರಹಿಸಿ ನ.30ರಂದು ಕಡಬ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾಧಿಕಾರಿ ಸಹಿತ ಪ್ರಾಕೃತಿಕ ವಿಕೋಪ ತಂಡದ ಅಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಖಾತೆಗೆ ಹಣ ಪಾವತಿಸುವ ತನಕ ಪ್ರತಿಭಟನೆ ನಿರಂತರವಾಗಿ ನಡೆಯಲಿದೆ ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಕಿಶೋರ್ ಶಿರಾಡಿ ತಿಳಿಸಿದರು.
ಬುಧವಾರ ಕಡಬ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾ ಸಮಸ್ಯೆಗಳ ನಡುವೆ ಬದುಕುತ್ತಿರುವ ರೈತರಿಗೆ ಇದೀಗ ಬೆಳೆ ವಿಮೆಯ ಹಣದ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಕಾರ್ಯಾಂಗದಲ್ಲಿರುವ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳೇ ರೈತರ ಪಾಲಿಗೆ ಮಾರಕವಾಗುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಅಧಿಕಾರಿಗಳ ಗುಂಪು ರೈತರಿಗೆ ಸಿಗಬೇಕಾದ ಕೋಟ್ಯಂತರ ರೂಪಾಯಿ ಬೆಳೆ ವಿಮೆ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ಬೆಳೆ ವಿಮೆ ಯೋಜನೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ರೈತರು ಸೇರಿ ಶೇ.35ರಷ್ಟು ಹಣವನ್ನು ವಿಮಾ ಕಂಪನಿಗೆ ಪಾವತಿಸುತ್ತಾರೆ. ಹವಾಮಾನ ಆಧಾರಿತ ಬೆಳೆ ವಿಮೆ ವ್ಯವಸ್ಥೆಯಲ್ಲಿ ಸರ್ಕಾರ ಪ್ರಾಕೃತಿಕ ವಿಕೋಪ ತಂಡವನ್ನು ನೇಮಿಸಿದ್ದು, ಈ ತಂಡ ಗ್ರಾಮಮಟ್ಟದಿಂದ ಮಾಹಿತಿ ಸಂಗ್ರಹಿಸಿ ಮಳೆಮಾಪಕ ಯಂತ್ರಗಳ ಮಾಹಿತಿಯನ್ನೂ ಆಧರಿಸುತ್ತದೆ. ಆದರೆ ಕಡಬ ತಾಲೂಕಿನಲ್ಲಿ 16 ಮಳೆಮಾಪಕ ಯಂತ್ರಗಳು ವರ್ಷಗಳಿಂದ ಹಾಳಾಗಿದ್ದು, ಇದರಿಂದ ಈ ಭಾಗದ ರೈತರಿಗೆ ಬೆಳೆ ವಿಮೆ ಪಾವತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಅಧಿಕಾರಿಗಳು ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಲಿ: ಪ್ರಾಕೃತಿಕ ವಿಕೋಪ ತಂಡ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೆಳೆ ವಿಮೆ ವಂಚನೆಯ ವಿಚಾರದಲ್ಲಿ ಇವರ ಪಾತ್ರದ ಬಗ್ಗೆಯೂ ಅನುಮಾನಗಳಿವೆ. ಈ ಅನುಮಾನಗಳಿಗೆ ತೆರೆ ಎಳೆಯಬೇಕಾದರೆ ಅಧಿಕಾರಿಗಳು ಮಾಧ್ಯಮಗಳ ಮುಂದೆ ಬಂದು, ತಾವು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಿದ್ದು, ವಿಮಾ ಕಂಪನಿಯ ತಪ್ಪಿನಿಂದ ರೈತರಿಗೆ ಹಣ ಸಿಗುತ್ತಿಲ್ಲ ಎಂದು ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು. ಪ್ರತಿಭಟನೆ ವೇಳೆ ಆಕ್ರೋಶಗೊಂಡ ರೈತರು ರಸ್ತೆ ತಡೆಗೆ ಮುಂದಾದರೆ ಅದಕ್ಕೆ ಜಿಲ್ಲಾಧಿಕಾರಿಯವರೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ಬೆಳೆ ವಿಮೆಯನ್ನು ನಂಬಿ ಕಾಯುತ್ತಿರುವ ರೈತರಿಗೆ ತಕ್ಷಣ ಹಣ ಪಾವತಿಸಬೇಕು. ಕಡಿಮೆ ಮೊತ್ತದ ಪರಿಹಾರ ಪಡೆದ ರೈತರಿಗೆ ನ್ಯಾಯಯುತ ಮೊತ್ತ ದೊರೆಯಬೇಕು. ಬೆಳೆ ವಿಮೆ ಹಣದ ದುರುಪಯೋಗಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಪ್ರಾಕೃತಿಕ ವಿಕೋಪ ತಂಡದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ವಿಮೆ ಕಟ್ಟಿಸಿಕೊಂಡ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಹಕಾರಿ ಸಂಘಗಳು ಹೋರಾಟಕ್ಕೆ ಬೆಂಬಲ ನೀಡಲಿ: ರೈತರಿಂದ ಬೆಳೆ ವಿಮೆ ಕಂತುಗಳನ್ನು ಸಂಗ್ರಹಿಸುವ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಡಿಸಿಸಿ ಬ್ಯಾಂಕ್ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಬೆಳೆ ವಿಮೆ ಕಟ್ಟಿಸಿಕೊಳ್ಳುವ ಸಂದರ್ಭದಲ್ಲಿ ರೈತರೊಂದಿಗೆ ಇರುವ ಸಹಕಾರಿ ಸಂಸ್ಥೆಗಳು ಸಂಕಷ್ಟದ ಸಂದರ್ಭದಲ್ಲಿ ರೈತರ ಪರವಾಗಿ ನಿಲ್ಲಬೇಕು. ನ.30ರೊಳಗೆ ಡಿಸಿಸಿ ಬ್ಯಾಂಕ್ ಸೇರಿದಂತೆ ಎಲ್ಲ ಸಹಕಾರಿ ಸಂಘಗಳು ಹೋರಾಟಕ್ಕೆ ಬೆಂಬಲ ನೀಡುವ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಮುಖಂಡರಾದ ದಿವ್ಯೇಶ್ ಗೌಡ ಕಲ್ಯ, ಮೋಹನ್ ಕೆರೆಕೋಡಿ ಹಾಗೂ ಕುಶಾಲಪ್ಪ ಗೌಡ ಅನಿಲ ಉಪಸ್ಥಿತರಿದ್ದರು.