



ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಟ್ಟೆ ಪ್ರದೇಶದಲ್ಲಿ ಹಲವು ದಿನಗಳಿಂದ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಎಸ್ಡಿಪಿಐ ನೆಲ್ಯಾಡಿ–ಕೌಕ್ರಾಡಿ ಗ್ರಾಮ ಸಮಿತಿಯ ಮನವಿಯ ಮೇರೆಗೆ ಗ್ರಾಮ ಪಂಚಾಯತ್ ತಾತ್ಕಾಲಿಕ ಪರಿಹಾರ ಕಲ್ಪಿಸಿದೆ.
ಪಟ್ಟೆ ಪ್ರದೇಶದ ಸುಮಾರು 30 ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನಿರ್ದಿಷ್ಟವಾಗಿ ಐದು ಮನೆಗಳಿಗೆ ಕಳೆದ ನಾಲ್ಕೈದು ದಿನಗಳಿಂದ ಸಮರ್ಪಕವಾಗಿ ನೀರು ಪೂರೈಕೆಯಾಗದೆ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಎಸ್ಡಿಪಿಐ ನೆಲ್ಯಾಡಿ–ಕೌಕ್ರಾಡಿ ಗ್ರಾಮ ಸಮಿತಿಯ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ನೇತೃತ್ವದ ನಿಯೋಗವು ಗ್ರಾಮ ಪಂಚಾಯತ್ಗೆ ಭೇಟಿ ನೀಡಿ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿತ್ತು.
ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್ ಕಾರ್ಯದರ್ಶಿಯವರು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ನಿವಾಸಿಗಳ ಅಹವಾಲು ಆಲಿಸಿದರು. ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಕೊಳವೆಬಾವಿ ಕೊರೆಸಲು ಸುಮಾರು ಎರಡು ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ತಿಳಿಸಿದ ಅವರು, ಅಲ್ಲಿಯವರೆಗೆ ಸ್ಥಳೀಯ ನಿವಾಸಿ ಮಹಮ್ಮದ್ ಪಟ್ಟೆ ಅವರ ಕೊಳವೆಬಾವಿಯಿಂದ ಪ್ರತಿದಿನ ಕುಡಿಯುವ ನೀರು ಪೂರೈಸಲು ವ್ಯವಸ್ಥೆ ಕಲ್ಪಿಸಿದ್ದಾರೆ.
ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ತಾತ್ಕಾಲಿಕ ನೀರಿನ ವ್ಯವಸ್ಥೆ ಕಲ್ಪಿಸಿದ ಪಂಚಾಯತ್ ಕಾರ್ಯದರ್ಶಿಯವರ ಕ್ರಮವನ್ನು ಎಸ್ಡಿಪಿಐ ಸ್ವಾಗತಿಸಿದೆ. ಆದರೆ ಪಟ್ಟೆ ಪ್ರದೇಶದ ಸುಮಾರು 30 ಮನೆಗಳ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಮಾತ್ರ ಸಾಲದು. ಕೊಳವೆಬಾವಿ ಕೊರೆಸುವ ಪ್ರಕ್ರಿಯೆಯನ್ನು ವಿಳಂಬ ಮಾಡದೆ ಶೀಘ್ರ ಪೂರ್ಣಗೊಳಿಸಿ, ಎಲ್ಲ ಮನೆಗಳಿಗೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುವಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ಎಸ್ಡಿಪಿಐ ಗ್ರಾಮ ಪಂಚಾಯತ್ಗೆ ಆಗ್ರಹಿಸಿದೆ.








































































































