






ರಾಮಕುಂಜ: ಶಿವಳ್ಳಿ ಸಂಪದ ರಾಮಕುಂಜ ವಲಯದ ವತಿಯಿಂದ ಶರವೂರು ದೇವಾಲಯದಲ್ಲಿ ನಡೆಯುತ್ತಿದ್ದ ದುರ್ಗಾ ಸಪ್ತಶತೀ ಪಾಠವು ಗುರುವಾರ ಸಮಾಪನಗೊಂಡಿತು.
ಸಮಾರೋಪ ಕಾರ್ಯಕ್ರಮದಲ್ಲಿ ತಾಲೂಕು ಶಿವಳ್ಳಿ ಸಂಪದ ಅಧ್ಯಕ್ಷ ಸತೀಶ ಮುಡಂಬಡಿತ್ತಾಯರು ಭಾಗವಹಿಸಿ ನಿರಂತರವಾಗಿ ನಡೆಯುತ್ತಿದ್ದ ದುರ್ಗಾ ಸಪ್ತಶತೀ ಪಾಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಾಠದ ಗುರುಗಳಾದ ರಾಘವೇಂದ್ರ ಭಟ್ ತೋಟಂತಿಲ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಿಷ್ಯಂದಿರೆಲ್ಲರೂ ಫಲಕಾಣಿಕೆಯನ್ನು ಸಮರ್ಪಿಸಿ ಗುರುಗಳನ್ನು ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಘವೇಂದ್ರ ಭಟ್ ತೋಟಂತಿಲ ಅವರು ಸಂತಸ ವ್ಯಕ್ತಪಡಿಸಿ, ಶಿಷ್ಯರ ಅಭಿಮಾನ ಹಾಗೂ ಗೌರವಕ್ಕೆ ಮೆಚ್ಚುಗೆ ಸೂಚಿಸಿದರು. ತಾಲೂಕು ಕಾರ್ಯದರ್ಶಿ ಬಾಲಚಂದ್ರ ಮುಚ್ಚಿಂತಾಯ ಹಾಗೂ ತಾಲೂಕು ಸಂಘಟನಾ ಕಾರ್ಯದರ್ಶಿ ರವೀಂದ್ರ ಟಿ ನೆಲ್ಯಾಡಿ ಅವರು ಶಿಷ್ಯರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಧಾರ್ಮಿಕ ಪಾಠ ಹಾಗೂ ಗುರು-ಶಿಷ್ಯರ ನಡುವಿನ ಗೌರವಯುತ ಸಂಬಂಧದ ಮಹತ್ವವನ್ನು ತಮ್ಮ ಅನಿಸಿಕೆಗಳ ಮೂಲಕ ವ್ಯಕ್ತಪಡಿಸಿದರು.
ರಾಮಕುಂಜ ವಲಯದ ಅಧ್ಯಕ್ಷ ಸೂರ್ಯಪ್ರಕಾಶ ಉಡುಪ ಕಾರ್ಯಕ್ರಮವನ್ನು ನಿರೂಪಿಸಿದರು. ತಾಲೂಕು ಜೊತೆ ಕಾರ್ಯದರ್ಶಿ ಸಂತೋಷ ಕುಮಾರ್ ಕುಂಞಿಕ್ಕು ವಂದಿಸಿದರು.
ಶಿವಳ್ಳಿ ಸಂಪದದ ಸದಸ್ಯರು ಹಾಗೂ ಶಿಷ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.








































































































