


ನೆಲ್ಯಾಡಿ: ಬೆಂಗಳೂರು ಸ್ಪಂದನ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ಜಾರಿಗೊಳಿಸಲಾಗಿರುವ ‘ಸ್ಪಂದನ ಆರೋಗ್ಯ ನಿಧಿ’ ಯೋಜನೆಯಡಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮೂವರು ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯ ಸೇವಾ ಕಾರ್ಯ ನಡೆಸಲಾಯಿತು.
ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ಪಾರ್ಶ್ವವಾಯುವಿನಿಂದಾಗಿ ದೇಹದ ಎಡಭಾಗದ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ಲಕ್ಷ್ಮಿ, ಅನಾರೋಗ್ಯದಿಂದ ಬಳಲುತ್ತಿರುವ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ದಂಬೆತ್ತಿಮಾರು ನಿವಾಸಿ ಚಂದ್ರಹಾಸ ಪೂಜಾರಿ ಹಾಗೂ ಗಾರ್ಡಡಿ ಗ್ರಾಮದ ಪ್ರಜ್ಞಾ ಕೆ. ಅವರಿಗೆ ಟ್ರಸ್ಟ್ ವತಿಯಿಂದ ತಲಾ ₹25,000 ಮೊತ್ತದ ಚೆಕ್ ವಿತರಿಸಲಾಯಿತು.
ಇದರೊಂದಿಗೆ ಕೊಯಿಲದ ಎಂಡೋಸಲ್ಫಾನ್ ಪೀಡಿತರ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದ ಟ್ರಸ್ಟ್ನ ಸದಸ್ಯರು ಅಲ್ಲಿನ ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿ ಸಂಭ್ರಮ ಹಂಚಿಕೊಂಡರು. ಮಕ್ಕಳೊಂದಿಗೆ ಸಮಯ ಕಳೆದು ಹಬ್ಬದ ಸಿಹಿ ಕ್ಷಣಗಳನ್ನು ಹಂಚಿಕೊಂಡ ತಂಡವು ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿತು.
ಈ ಸಂದರ್ಭದಲ್ಲಿ ಬೆಂಗಳೂರು ಸ್ಪಂದನ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಚಿದಾನಂದ, ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಸದಸ್ಯರು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮ್ಯಾನೇಜರ್ ಸೆಬಾಸ್ಟಿನ್ ವಿ.ಜೆ., ನೆಲ್ಯಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಆನಂದ ಪಿಲವೂರು, ಕುಡ್ತಾಜೆ ದೇವಸ್ಥಾನ ಸಮಿತಿ ಸದಸ್ಯ ಮಾಧವ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದೇರಿ ಒಕ್ಕೂಟದ ಅಧ್ಯಕ್ಷ ಜಿ. ವರ್ಗೀಸ್, ಮಾದೇರಿ ನಂದಗೋಕುಲ ಭಜನಾ ಮಂಡಳಿಯ ಕಾರ್ಯದರ್ಶಿ ಭವ್ಯ ವಿನಯ್ ಹಾಗೂ ಸದಸ್ಯೆ ಹೇಮಾವತಿ ಜೆ. ಉಪಸ್ಥಿತರಿದ್ದರು








































































































