





ಬೆಳ್ತಂಗಡಿ: ಕರ್ನಾಟಕದ ನ್ಯಾಯಾಂಗ ಕ್ಷೇತ್ರದಲ್ಲಿ ಸುದೀರ್ಘ ಅನುಭವ, ಅಪಾರ ಜ್ಞಾನ, ಬದ್ಧತೆ ಹಾಗೂ ಸೇವೆಯ ಮೂಲಕ ವಿಶಿಷ್ಟ ಸಾಧನೆ ಮಾಡಿರುವ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಉಷಾರಾಣಿ ಅವರನ್ನು ಉಜಿರೆಯ ಧೀಮತಿ ಮಹಿಳಾ ಸಮಾಜದ ವತಿಯಿಂದ ಗೌರವಿಸಲಾಯಿತು.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ನಡಿಬೆಟ್ಟು ಗುತ್ತು ಜೈನ ಮನೆತನದ ಉಷಾರಾಣಿ ಅವರು ಉತ್ತಮ ಜೀವನ ಮೌಲ್ಯಗಳು, ಶಿಸ್ತು, ಜೀವನ ಕೌಶಲ ಹಾಗೂ ಧಾರ್ಮಿಕ ಹಿನ್ನೆಲೆಯೊಂದಿಗೆ ಬೆಳೆದು, ತಮ್ಮ ಪರಿಶ್ರಮ ಮತ್ತು ಸಾಧನೆಯ ಮೂಲಕ ನ್ಯಾಯಾಂಗ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಸಿವಿಲ್ ನ್ಯಾಯಾಧೀಶೆಯಾಗಿ ನಾನಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ, ಇದೀಗ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ಧೀಮತಿ ಮಹಿಳಾ ಸಮಾಜದ ಅಧ್ಯಕ್ಷೆ ಅಶ್ವಿನಿ ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ 30ಕ್ಕೂ ಅಧಿಕ ಸದಸ್ಯರು ನಡಿಬೆಟ್ಟು ಗುತ್ತುವಿನಲ್ಲಿರುವ ಉಷಾರಾಣಿ ಅವರ ಸ್ವಗೃಹಕ್ಕೆ ಭೇಟಿ ನೀಡಿ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ತಮ್ಮ ಬಾಲ್ಯದ ಜೀವನ, ತಂದೆ-ತಾಯಿಯ ಪ್ರೋತ್ಸಾಹ ಮತ್ತು ಮಾರ್ಗದರ್ಶನದ ಕುರಿತು ಉಷಾರಾಣಿ ಅವರು ನೆನಪುಗಳನ್ನು ಹಂಚಿಕೊಂಡರು. ಜೈನ ಧರ್ಮದ ಪಂಚಾಣುವ್ರತಗಳು, ಧಾರ್ಮಿಕ ತತ್ವಗಳು ಹಾಗೂ ಸಿದ್ಧಾಂತಗಳ ಮಹತ್ವದ ಬಗ್ಗೆಯೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಮಹಿಳಾ ಸಮಾಜದ ಸದಸ್ಯರ ಭೇಟಿಗೆ ಸಂತಸ ವ್ಯಕ್ತಪಡಿಸಿದರು.








































































































