ಕೊಕ್ಕಡ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಾಕಿ ಇರುವ ಹಣವನ್ನು ಕೊಡಿಸುವ ಜವಾಬ್ದಾರಿಯನ್ನು ಬೆಳ್ತಂಗಡಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ವಹಿಸಿಕೊಳ್ಳಬೇಕು ಎಂದು ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಪುಟಾಣಿ ಆಗ್ರಹಿಸಿದರು.
ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಕಾಯರ್ತಡ್ಕ ರಿಕ್ಷಾ ನಿಲ್ದಾಣದಲ್ಲಿ ರಾಜ್ಯ ಸರಕಾರದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ಖಚಿತ, ಉಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದರು. ಆದರೆ ಇದೀಗ ಗ್ಯಾರಂಟಿ ಯೋಜನೆಗಳಲ್ಲಿ ಖಚಿತವೂ ಇಲ್ಲ, ಉಚಿತವೂ ಇಲ್ಲದಂತಾಗಿದೆ. ಪ್ರತಿಭಟನೆ ಆರಂಭವಾದ ಬಳಿಕ ಕೆಲವರಿಗೆ ₹6,000, ಇನ್ನು ಕೆಲವರಿಗೆ ₹4,000 ಹಾಗೂ ಮತ್ತಿತರರಿಗೆ ₹2,000 ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಮಹಿಳೆಯರಿಗೆ ಸಕಾಲದಲ್ಲಿ ಗೃಹಲಕ್ಷ್ಮಿ ಹಣ ದೊರೆಯುವಂತೆ ಮಾಡುವುದು ಗ್ಯಾರಂಟಿ ಸಮಿತಿ ಅಧ್ಯಕ್ಷರ ಜವಾಬ್ದಾರಿಯಾಗಿದೆ ಎಂದರು.
ರೈತರಿಗೆ ಕೇಂದ್ರ ಸರಕಾರ ನೀಡುತ್ತಿದ್ದ ₹6,000ಕ್ಕೆ ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದ ವತಿಯಿಂದ ಹೆಚ್ಚುವರಿಯಾಗಿ ₹4,000 ಸೇರಿಸಿ ನೀಡುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಹೆಚ್ಚುವರಿ ನೆರವನ್ನು ಸ್ಥಗಿತಗೊಳಿಸಿದೆ. ಬೆಳೆ ವಿಮೆ ಹಣದಲ್ಲಿಯೂ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರಕಾರದ ವೈಫಲ್ಯಗಳ ಪಟ್ಟಿ ಚಾಟ್ಜಿಪಿಟಿಯಲ್ಲೂ ಸಿಗುತ್ತದೆ ಎಂದು ವ್ಯಂಗ್ಯವಾಡಿದ ಅವರು, ಸರಳ ನಿಯಮಗಳನ್ನು ಕಠಿಣಗೊಳಿಸಿ ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ‘ಕುಬೇರ ಮುಖ್ಯಮಂತ್ರಿ, ಬಡ ಪ್ರಜೆಗಳು’ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
‘ಮನ್ ಕಿ ಬಾತ್’ ಜಿಲ್ಲಾ ಪ್ರಮುಖ್ ಸೀತಾರಾಮ್ ಬೆಳಾಲ್ ಮಾತನಾಡಿ, ಬೆಳ್ತಂಗಡಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಿಗೆ ತಿಂಗಳಿಗೆ ₹25 ಸಾವಿರ ಸಂಬಳ ನೀಡುವ ಸರಕಾರಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರಿಗೆ ಸಕಾಲದಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು. ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನರ ಪಿಂಚಣಿ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳು ತಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಎಂದು ತಿಳಿದುಕೊಳ್ಳಲು ಅಂಚೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಹಣ ಜಮೆಯಾಗದಿದ್ದರೆ ಎರಡು ಮೂರು ದಿನಗಳ ಬಳಿಕ ಮತ್ತೆ ಹೋಗಬೇಕಾಗುತ್ತದೆ. ಈ ಸಮಸ್ಯೆ ತಪ್ಪಿಸಲು ಸರಕಾರ ಸಕಾಲದಲ್ಲಿ ಪಿಂಚಣಿ ಪಾವತಿಸಬೇಕು. ಹಾಲಿನ ದರ ಹೆಚ್ಚಿಸಿ ರೈತರಿಗೆ ಹೆಚ್ಚುವರಿ ಹಣ ನೀಡಿದ ಸರಕಾರ, ಬಳಿಕ ಪಶು ಆಹಾರದ ಬೆಲೆಯನ್ನೂ ಹೆಚ್ಚಿಸುವ ಮೂಲಕ ರೈತರಿಗೆ ದೊರೆತ ಹೆಚ್ಚುವರಿ ಆದಾಯವನ್ನು ವಾಪಸ್ ಪಡೆದಂತಾಗಿದೆ ಎಂದು ಟೀಕಿಸಿದರು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರೋಧಿಸುವ ಕಾಂಗ್ರೆಸ್, ಅದರ ವಿರುದ್ಧದ ಪ್ರತಿಭಟನೆಗೆ ಮುಸ್ಲಿಮರನ್ನು ಬಳಸಿಕೊಂಡಿದೆ ಎಂದೂ ಆರೋಪಿಸಿದರು.
ತಾಲೂಕು ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ರಾಜೇಶ್ ನಿಡ್ಡಾಜೆ ಮಾತನಾಡಿ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಜನರನ್ನು ವಂಚಿಸಿದೆ. ಇದೇ ಭರವಸೆಗಳನ್ನು ಮುಂದಿಟ್ಟುಕೊಂಡು ಮತ್ತೆ ಮತ ಕೇಳಲು ಬಂದರೆ ಮಹಿಳೆಯರು ಚಪ್ಪಲಿಯಿಂದ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ರಾಜ್ಯಾದ್ಯಂತ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳ ಪರಿಣಾಮವಾಗಿಯೇ ಗ್ಯಾರಂಟಿ ಯೋಜನೆಯ ಒಂದು ಕಂತಿನ ಹಣ ಬಿಡುಗಡೆಗೆ ಹಿಂದಿನ ದಿನ ಅನುಮೋದನೆ ದೊರೆತಿದೆ ಎಂದು ಅವರು ಹೇಳಿದರು. ಗ್ಯಾರಂಟಿ ಯೋಜನೆಗಳಿಗಾಗಿ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಪ್ರತ್ಯೇಕ ಅಧ್ಯಕ್ಷರನ್ನು ನೇಮಿಸಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿದ ಅವರು, ನಿಗಮ ಮಂಡಳಿಗಳಿಗೂ ಅಧ್ಯಕ್ಷರ ಜತೆಗೆ ನಿರ್ದೇಶಕರನ್ನು ನೇಮಿಸಲಾಗಿದೆ. ಸರಕಾರದ ಭರವಸೆಗಳನ್ನು ನಂಬಿದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳಿಗೆ ವಿತರಿಸಲಾದ ಶೂಗಳ ಗುಣಮಟ್ಟವೂ ಪ್ರಶ್ನಾರ್ಹವಾಗಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ, ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ, ಬಿಜೆಪಿ ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರೀಶ್ ಕೊಯ್ಲಾ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ವಿಜಯ ಕುಮಾರ್, ಪಂಚಾಯತ್ ಮಾಜಿ ಉಪಾಧ್ಯಕ್ಷ ಮಂಜುನಾಥ್ ಗೌಡ ಹಾರಿತ್ತಕಜೆ ಹಾಗೂ ಟೊಕ್ಕಯ್ಯ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.