




ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಕಡಬ ತಾಲೂಕು, ನೆಲ್ಯಾಡಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಬಡ ಮಹಿಳೆಯೊಬ್ಬರ ವಾತ್ಸಲ್ಯ ಮನೆ ನಿರ್ಮಾಣ ಕಾರ್ಯಕ್ಕೆ ಶ್ರಮದಾನದ ಮೂಲಕ ನೆರವು ನೀಡುವ ಮೂಲಕ ಮಾನವೀಯ ಸೇವೆ ಸಲ್ಲಿಸಿದ್ದಾರೆ.
ಶರವೂರು ಗ್ರಾಮದ ಕೊಂಡಾಡಿ ಕೊಪ್ಪದಲ್ಲಿ ವಾಸಿಸುತ್ತಿರುವ ಬಡ ಮಹಿಳೆ ಎಲ್ಯಕ್ಕ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ವಾತ್ಸಲ್ಯ ಮನೆ ನಿರ್ಮಿಸಿಕೊಡಲಾಗುತ್ತಿದೆ. ಆದರೆ, ಮನೆ ನಿರ್ಮಾಣ ಸ್ಥಳಕ್ಕೆ ಸೂಕ್ತ ಮಾರ್ಗದ ವ್ಯವಸ್ಥೆ ಇಲ್ಲದ ಕಾರಣ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಿಮೆಂಟ್ ಹಾಗೂ ಇಟ್ಟಿಗೆಗಳನ್ನು ಸಾಗಿಸುವುದು ಕಷ್ಟಕರವಾಗಿತ್ತು. ಈ ಸಮಸ್ಯೆಯನ್ನು ಮನಗಂಡ ನೆಲ್ಯಾಡಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಮುಂದೆ ಬಂದು, ಸಿಮೆಂಟ್ ಮತ್ತು ಇಟ್ಟಿಗೆಗಳನ್ನು ಹೊತ್ತು ಸಾಗಿಸುವ ಮೂಲಕ ಮನೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದರು.
ಮೂಲಸೌಕರ್ಯಗಳ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದ ಬಡ ಮಹಿಳೆಯ ಮನೆ ನಿರ್ಮಾಣಕ್ಕೆ ಸ್ವಯಂಸೇವಕರು ಕೈಜೋಡಿಸಿರುವುದು ಸೇವಾ ಮನೋಭಾವ ಹಾಗೂ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ. ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯದಲ್ಲಿ ಶೌರ್ಯ ಘಟಕದ ಸದಸ್ಯರು ತೊಡಗಿಸಿಕೊಂಡಿದ್ದಾರೆ.
ಈ ಶ್ರಮದಾನ ಸೇವೆಯಲ್ಲಿ ಕಡಬ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ರಮೇಶ್ ಬಾಣಜಾಲು, ಘಟಕ ಸಂಯೋಜಕಿ ನಮಿತಾ ಎಸ್. ಶೆಟ್ಟಿ ಹಾಗೂ ಶೌರ್ಯ ಘಟಕದ ಸ್ವಯಂಸೇವಕರಾದ ಬಾಲಕೃಷ್ಣ ಗೌಡ, ಸಂತೋಷ್ ಕುಮಾರ್, ದಿನೇಶ್, ಗೀತಾ, ಕುಸುಮ, ಜಯಂತಿ ಮತ್ತು ಅಮಿತಾ ಶೆಟ್ಟಿ ಭಾಗವಹಿಸಿ ಸೇವೆ ಸಲ್ಲಿಸಿದರು.








































































































