


ನೆಲ್ಯಾಡಿ :ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಿದ್ದು, ಇದರ ಭಾಗವಾಗಿ ಉಪ್ಪಿನಂಗಡಿ–ಕಡಬ ಬ್ಲಾಕ್ ಸಮಿತಿಯ ವತಿಯಿಂದ ಎಲೆಕ್ಷನ್ ಸಮಿಟ್ ಹಾಗೂ ಚುನಾವಣಾ ಸಿದ್ಧತಾ ಸಭೆ ನಡೆಯಿತು.
ಎಸ್.ಡಿ.ಪಿ.ಐ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಉಸ್ತುವಾರಿ ಸಿದ್ದೀಕ್ ಅಲೆಕ್ಕಡಿ ಅವರು ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ರೂಪುರೇಷೆ, ಪಕ್ಷದ ಚುನಾವಣಾ ಕಾರ್ಯತಂತ್ರ ಹಾಗೂ ಕ್ಷೇತ್ರವಾರು ಸಿದ್ಧತೆಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕಡಬ, ನೆಲ್ಯಾಡಿ, ಉಪ್ಪಿನಂಗಡಿ, ಕೊಯಿಲ ಹಾಗೂ ನೆಕ್ಕಿಲಾಡಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ಪ್ರತಿ ಕ್ಷೇತ್ರದ ರಾಜಕೀಯ ಪರಿಸ್ಥಿತಿ, ಪಕ್ಷದ ಸಂಘಟನಾ ಬಲ ಹಾಗೂ ಗೆಲುವಿನ ಸಾಧ್ಯತೆಗಳನ್ನು ಅವಲೋಕಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಈ ಪಟ್ಟಿಯನ್ನು ಮುಂದಿನ ಹಂತದ ಪರಿಶೀಲನೆಗಾಗಿ ಜಿಲ್ಲಾ ಸಮಿತಿಗೆ ಕಳುಹಿಸಲು ನಿರ್ಧರಿಸಲಾಯಿತು.
ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠವಾಗಿ ಸಂಘಟಿಸುವುದು, ಕ್ಷೇತ್ರವಾರು ಚುನಾವಣಾ ತಂತ್ರಗಳನ್ನು ರೂಪಿಸುವುದು, ಕಾರ್ಯಕರ್ತರನ್ನು ಸಜ್ಜುಗೊಳಿಸುವುದು ಹಾಗೂ ಜನಪರ ಹೋರಾಟಗಳ ಮೂಲಕ ಮತದಾರರ ವಿಶ್ವಾಸ ಗಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಚುನಾವಣೆಯನ್ನು ಎದುರಿಸಲು ಸಂಘಟಿತವಾಗಿ ಕಾರ್ಯನಿರ್ವಹಿಸುವುದು ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಪಕ್ಷದ ರಾಜಕೀಯ ನೆಲೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಯಿತು.
ಸಭೆಯಲ್ಲಿ ಎಸ್.ಡಿ.ಪಿ.ಐ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ ಹಾಗೂ ಅಬೂಬಕ್ಕರ್ ಸಿದ್ದೀಕ್ ಪುತ್ತೂರು ಉಪಸ್ಥಿತರಿದ್ದರು. ಉಪ್ಪಿನಂಗಡಿ–ಕಡಬ ಬ್ಲಾಕ್ ಸಮಿತಿ ಅಧ್ಯಕ್ಷ ಬಿ.ಕೆ. ಸುಲೈಮಾನ್, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ನೆಲ್ಯಾಡಿ ಹಾಗೂ ಉಪ್ಪಿನಂಗಡಿ ಚುನಾವಣಾ ಉಸ್ತುವಾರಿ ರಶೀದ್ ಮಠ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಹಾಗೂ ಸಂಭಾವ್ಯ ಅಭ್ಯರ್ಥಿಗಳು ಭಾಗವಹಿಸಿದ್ದರು.








































































































