ಔಷಧಿ, ವೈದ್ಯಕೀಯ ಸಲಕರಣೆ ಸೇರಿ ₹2ರಿಂದ ₹3 ಲಕ್ಷ ಮೌಲ್ಯದ ಸೊತ್ತುಗಳಿಗೆ ಹಾನಿ







ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕ್ಲಿನಿಕ್ಗೆ ಬೆಂಕಿ ಹಚ್ಚಿ ಔಷಧಿ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ನಿವಾಸಿ ಡಾ. ಪ್ರದೀಪ ಎ. ಅವರು ನಾವೂರು ಗ್ರಾಮದಲ್ಲಿ ನಡೆಸುತ್ತಿದ್ದ ಕ್ಲಿನಿಕ್ಗೆ 2026ರ ಅ. 6ರಂದು ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಘಟನೆಯಿಂದ ಕ್ಲಿನಿಕ್ನಲ್ಲಿದ್ದ ಔಷಧಿಗಳು ಹಾಗೂ ವೈದ್ಯಕೀಯ ಸಲಕರಣೆಗಳು ಸೇರಿದಂತೆ ಅಂದಾಜು ₹2ರಿಂದ ₹3 ಲಕ್ಷ ಮೌಲ್ಯದ ಸೊತ್ತುಗಳು ಸುಟ್ಟುಹೋಗಿ ಹಾನಿಯಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 112/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಕಲಂ 326(f), 326(g) ಹಾಗೂ 324(5)ರಂತೆ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಬೆಳ್ತಂಗಡಿ ಠಾಣೆಯ ಪೊಲೀಸರು, ನಾವೂರು ಗ್ರಾಮದ ನಿವಾಸಿಗಳಾದ ರವಿ ಕುಮಾರ್ (31), ಸುರೇಶ್ ಪಿ.ಎನ್. (44) ಹಾಗೂ ದಿನೇಶ್ ಪ್ರಭು (51) ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.








































































































