






ಕೊಕ್ಕಡ: ಶಿಬಾಜೆ ಗ್ರಾಮದ ಬಂಡಿಹೊಳೆ ಕೆಮ್ಮಣ್ಣ ನಿವಾಸಿ ಗಣೇಶ್ ಎಂಬವರ ಮನೆಗೆ ಗುರುವಾರ ಸಂಜೆ ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಸಾಕಿದ್ದ ಮೂರು ಕೋಳಿಗಳು ಸಾವನ್ನಪ್ಪಿವೆ. ಅಲ್ಲದೆ, ಮನೆಯಲ್ಲಿದ್ದ ಟಿವಿ ಹಾಗೂ ವಿದ್ಯುತ್ ಮೀಟರ್ ಸ್ಫೋಟಗೊಂಡು ಹಾನಿಯಾಗಿದೆ.
ಘಟನೆ ಸಂಭವಿಸಿದ ಸಂದರ್ಭದಲ್ಲಿ ಗಣೇಶ್ ಅವರು ಮಾತ್ರ ಮನೆಯಲ್ಲಿದ್ದರು. ಅವರ ತಾಯಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರಿಂದ ಮನೆಯಲ್ಲಿರಲಿಲ್ಲ. ಸಿಡಿಲಿನ ತೀವ್ರತೆಗೆ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ. ಘಟನೆಯಿಂದಾಗಿ ಮನೆಯವರಿಗೆ ಆತಂಕ ಉಂಟಾಗಿದೆ.
ಶಿಶಿಲ, ಅರಸಿನಮಕ್ಕಿ, ಕೊಕ್ಕಡ ಹಾಗೂ ನೆಲ್ಯಾಡಿ ಪರಿಸರದಲ್ಲಿ ಗುರುವಾರ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಸಂಜೆ ವೇಳೆಗೆ ಗುಡುಗು, ಸಿಡಿಲು ಸಹಿತ ಮಳೆ ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ಗಣೇಶ್ ಅವರ ಮನೆಗೆ ಸಿಡಿಲು ಬಡಿದಿದೆ.
ಘಟನೆಯ ಮಾಹಿತಿ ತಿಳಿದು ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಅರಸಿನಮಕ್ಕಿ ಹಾಗೂ ಶಿಶಿಲ ಘಟಕದ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ದಿನಕರ್ ಕುರುಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತ ಕುಟುಂಬಕ್ಕೆ ಸಹಕಾರ ನೀಡುತ್ತಿದ್ದಾರೆ.








































































































