ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಸರೆಯಾಗುವ ಸಾಮಾಜಿಕ ಕ್ರಾಂತಿ: ಅಜಿತ್ ಕುಮಾರ್ ಪಾಲೇರಿ
ಸುಜ್ಞಾನ ನಿಧಿ, ವಾತ್ಸಲ್ಯ ಮನೆ, ಶೌರ್ಯ ತಂಡಕ್ಕೆ ಸಮವಸ್ತ್ರ ವಿತರಣೆ, ಪದಾಧಿಕಾರಿಗಳಿಗೆ ಕ್ಷೇತ್ರದ ವತಿಯಿಂದ ಬ್ಯಾಗ್ ಹಸ್ತಾಂತರ ಹಾಗೂ ಶರವೂರು ದೇವಸ್ಥಾನಕ್ಕೆ ₹5 ಲಕ್ಷ ನೆರವು ಹಸ್ತಾಂತರ
ಆಲಂಕಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಡಬ ತಾಲೂಕು, ಪ್ರಗತಿಬಂಧು–ಸ್ವಸಹಾಯ ಸಂಘಗಳ ಒಕ್ಕೂಟ ಆಲಂಕಾರು ವಲಯ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಹಯೋಗದಲ್ಲಿ, ಪರಮಪೂಜ್ಯ ಪದ್ಮಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ‘ದೀನ ದಯಾಳು ರೈತ ಸಭಾಭವನ’ದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಅಜಿತ್ ಕುಮಾರ್ ಪಾಲೇರಿ, ಸುಮಾರು 25 ವರ್ಷಗಳ ಹಿಂದೆ ಪೂಜನೀಯ ಖಾವಂದರು ಬಿತ್ತಿದ ಬೀಜ ಇಂದು ಉತ್ತಮ ಫಸಲನ್ನು ನೀಡುತ್ತಿರುವುದು ಸಂತೋಷದ ಸಂಗತಿ. ನಾವೆಲ್ಲರೂ ಆ ಬೀಜದಿಂದ ಬೆಳೆದ ಫಸಲಿನ ಭಾಗವಾಗಿದ್ದೇವೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸ್ವಸಹಾಯ ಸಂಘಗಳ ಮೂಲಕ ಜನರಿಗೆ ಆರ್ಥಿಕ ನೆರವು, ಸ್ವಾವಲಂಬನೆ ಹಾಗೂ ಸಂಘಟನೆಯ ಶಕ್ತಿಯನ್ನು ನೀಡುವ ಉದ್ದೇಶದಿಂದ ಆರಂಭಿಸಲಾದ ಯೋಜನೆ ಇಂದು ಸಮಾಜದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಿದೆ. ಬ್ಯಾಂಕ್ಗಳ ಮೂಲಕ ಸುಲಭವಾಗಿ ದೊರೆಯದ ಆರ್ಥಿಕ ನೆರವು ಸಂಘಗಳ ಮೂಲಕ ಜನರಿಗೆ ತಲುಪುವ ವ್ಯವಸ್ಥೆ ರೂಪುಗೊಂಡಿದ್ದು, ಜನರಲ್ಲಿ ಸಂಘಟನೆಯ ಶಕ್ತಿ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯ ಮನೋಭಾವ ಬೆಳೆದಿದೆ ಎಂದರು.
ಪದಾಧಿಕಾರಿಗಳ ಪದಗ್ರಹಣ ಎಂದರೆ ಕೇವಲ ಸ್ಥಾನವನ್ನು ಹಸ್ತಾಂತರಿಸುವುದಲ್ಲ. ಸಂಘದ ಆಶಯ, ಮೌಲ್ಯಗಳು ಹಾಗೂ ಸಮಾಜದ ಬಗ್ಗೆ ಇರುವ ಹೊಣೆಗಾರಿಕೆಯನ್ನು ಮುಂದಿನವರಿಗೆ ಹಸ್ತಾಂತರಿಸುವ ಮಹತ್ವದ ಜವಾಬ್ದಾರಿಯಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಸಭೆ, ಸಮಾರಂಭಗಳಿಗೆ ಸೀಮಿತವಾಗದೆ ಸಮಾಜದಲ್ಲಿ ನೈಜ ಬದಲಾವಣೆ ತರುವ ಕಾರ್ಯಗಳಾಗಿವೆ. ಸಂಘಟನೆಗಳಲ್ಲಿ ವಿವಿಧ ಧರ್ಮಗಳ ಜನರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಧರ್ಮ, ಜಾತಿ ಹಾಗೂ ಭೇದಗಳನ್ನು ಮೀರಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಪೂಜನೀಯ ಖಾವಂದರ ಆಶಯವನ್ನು ಮುಂದುವರಿಸಬೇಕು ಎಂದು ಹೇಳಿದರು.
ಕಡಬ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿ ಮಾತನಾಡಿ ಹಸಿದವನಿಗೆ ಅನ್ನ ನೀಡುವುದಕ್ಕಿಂತ ಅನ್ನವನ್ನು ಸಂಪಾದಿಸುವ ಕಲೆಯನ್ನು ಕಲಿಸಿಕೊಡುವುದು ಶ್ರೇಷ್ಠ ಎಂಬ ಪರಮಪೂಜ್ಯರ ಆಶಯದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾಗಿದೆ. ನೆರವು ಒಂದು ದಿನದ ಸಹಾಯವಾಗದೆ, ಬಡವರ ಬದುಕಿನಲ್ಲಿ ಸ್ವಾವಲಂಬನೆಯ ಬೆಳಕಾಗಬೇಕು ಎಂಬ ದೂರದೃಷ್ಟಿ ಯೋಜನೆಯ ಹಿಂದಿದೆ ಎಂದರು.
1982ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಅಭಿವೃದ್ಧಿ, ಶ್ರಮ ವಿನಿಮಯ ಹಾಗೂ ಜನರ ಸಂಘಟನೆಯ ಮೂಲಕ ಗ್ರಾಮೀಣ ಬದುಕಿನಲ್ಲಿ ಪರಿವರ್ತನೆ ತಂದಿದೆ. ‘ನಿನ್ನ ಮನೆಗೆ ನಾನು ಕೆಲಸಕ್ಕೆ ಬರುತ್ತೇನೆ, ನನ್ನ ಮನೆಗೆ ನೀನು ಕೆಲಸಕ್ಕೆ ಬಾ’ ಎಂಬ ಶ್ರಮ ವಿನಿಮಯದ ಕಲ್ಪನೆಯ ಮೂಲಕ ಪ್ರಗತಿಬಂಧು ಸಂಘಗಳು ಆರಂಭಗೊಂಡವು. ಕೃಷಿಭೂಮಿಗಳ ಅಭಿವೃದ್ಧಿ, ಕೃಷಿ ಸಲಕರಣೆಗಳ ನೆರವು, ಮನೆಗಳ ಸುಧಾರಣೆ ಸೇರಿದಂತೆ ಹಲವು ರೀತಿಯ ನೆರವುಗಳ ಮೂಲಕ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದೆ ಎಂದು ವಿವರಿಸಿದರು.
ಇಂದು ಕರ್ನಾಟಕ ಮಾತ್ರವಲ್ಲದೆ ಕೇರಳದ ಕಾಸರಗೋಡು ಹಾಗೂ ಮಹಾರಾಷ್ಟ್ರದ ಗಡಿಭಾಗಗಳಲ್ಲಿಯೂ ಯೋಜನೆಯ ಸೇವೆ ವಿಸ್ತರಿಸಿದೆ. ಸುಮಾರು ಐದೂವರೆ ಲಕ್ಷ ಸಂಘಗಳು ಹಾಗೂ ಅರವತ್ತು ಲಕ್ಷ ಸದಸ್ಯರನ್ನು ಒಳಗೊಂಡ ಬೃಹತ್ ಸಾಮಾಜಿಕ ಸಂಸ್ಥೆಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳೆದಿದೆ. ಸಾಲ ನೀಡುವ ಸಂಸ್ಥೆ ಎಂಬುದಕ್ಕಿಂತ ಜನರ ಬದುಕಿನಲ್ಲಿ ಪರಿವರ್ತನೆ ತರುವ, ಸಮುದಾಯದ ಅಭಿವೃದ್ಧಿಗೆ ಪೂರಕವಾದ ಅನೇಕ ಸೇವಾ ಕಾರ್ಯಕ್ರಮಗಳನ್ನು ನಡೆಸುವ ಸಂಸ್ಥೆಯಾಗಿದೆ ಎಂದರು.
ಒಕ್ಕೂಟದ ಪದಾಧಿಕಾರಿಗಳು ಗ್ರಾಮದಲ್ಲಿರುವ ಮನೆ ಇಲ್ಲದವರು, ಅಶಕ್ತರು, ಬಡ ವಿದ್ಯಾರ್ಥಿಗಳು, ಸಂಕಷ್ಟದಲ್ಲಿರುವ ಕುಟುಂಬಗಳು ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾದವರನ್ನು ಗುರುತಿಸಿ ಯೋಜನೆಯ ನೆರವು ತಲುಪಿಸುವ ಜವಾಬ್ದಾರಿ ಹೊಂದಿದ್ದಾರೆ. ಜನಮಂಗಳ ಕಾರ್ಯಕ್ರಮದ ಮೂಲಕ ವೀಲ್ಚೇರ್, ವಾಟರ್ ಬೆಡ್ ಸೇರಿದಂತೆ ಅಗತ್ಯ ನೆರವು, ಸುಜ್ಞಾನ ನಿಧಿಯ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ವಾತ್ಸಲ್ಯ ಮನೆ ಯೋಜನೆಯ ಮೂಲಕ ಮನೆ ನಿರ್ಮಾಣ ಹಾಗೂ ಸುಧಾರಣೆ ಮತ್ತು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಾಶಾಸನ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳಿವೆ.
ಕಡಬ ತಾಲೂಕಿನಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಸುಮಾರು ಎಂಟು ಮನೆಗಳನ್ನು ನಿರ್ಮಿಸಿ ಅಥವಾ ಸುಧಾರಿಸಿ ನೆರವು ನೀಡಲಾಗಿದೆ. ಹೊಸದಾಗಿ ಜವಾಬ್ದಾರಿ ಸ್ವೀಕರಿಸಿರುವ ಪದಾಧಿಕಾರಿಗಳು ಮುಂದಿನ ಎರಡು ವರ್ಷಗಳಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಸೇವೆ ತಲುಪಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸೇವೆಯ ಮೂಲಕ ಪುಣ್ಯಾತ್ಮರಾಗುವ ಅವಕಾಶ ಪ್ರತಿಯೊಬ್ಬರಿಗೂ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರವೂರು ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ವಹಿಸಿದ್ದರು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ರೈ ಮನವಳಿಕೆ, ಆತೂರು ಬದ್ರಿಯಾ ಜುಮಾ ಮಸೀದಿಯ ಉಸ್ತಾದು ಡಿ.ಎ.ಹಂಝ ಸಖಾಫಿ, ಪೆರಾಬೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹೇಮಲತಾ ಪ್ರದೀಪ್ ಬಾಕಿಲ, ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಇಂದುಶೇಖರ ಶೆಟ್ಟಿ, ಆಲಂಕಾರು ವಲಯ ಭಜನಾ ಪರಿಷತ್ ಅಧ್ಯಕ್ಷ ಹರೀಶ್ ಮುಂಡಾಳ, ಕಡಬ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಕೇಶವ ಟಿ. ಉಪಸ್ಥಿತರಿದ್ದರು.
ಚನ್ನಕೇಶವ ಶೆಟ್ಟಿ ಸ್ವಾಗತಿಸಿದರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಆಲಂಕಾರು ವಲಯ ಮೇಲ್ವಿಚಾರಕಿ ಲತಾ ವರದಿ ವಾಚಿಸಿದರು. ಶಿಕ್ಷಕ ಚಂದ್ರಹಾಸ ಕೆ.ಸಿ ನಿರೂಪಿಸಿದರು. ಮಮತಾ ಶೆಟ್ಟಿ ಅಂಬರಾಜೆ ವಂದಿಸಿದರು.
ಕಾರ್ಯಕ್ರಮದಲ್ಲಿ ಸುಜ್ಞಾನ ನಿಧಿ ವಿತರಣೆ, ವಾತ್ಸಲ್ಯ ಮನೆ ಹಸ್ತಾಂತರ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಸಮವಸ್ತ್ರ ವಿತರಣೆ, ಪದಾಧಿಕಾರಿಗಳಿಗೆ ಕ್ಷೇತ್ರದ ವತಿಯಿಂದ ಬ್ಯಾಗ್ ಹಸ್ತಾಂತರ ಹಾಗೂ ಶರವೂರು ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ₹5 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಲಂಕಾರು ವಲಯದ ಸೇವಾ ಪ್ರತಿನಿಧಿಗಳು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು, ಭಜನಾ ಪರಿಷತ್ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಪ್ರಗತಿಬಂಧು–ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.