



ನೆಲ್ಯಾಡಿ: ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಸ್ಕೂಟರ್ ಸವಾರ ಗಾಯಗೊಂಡ ಘಟನೆ ಭಾನುವಾರದಂದು ರಾತ್ರಿ ನೆಲ್ಯಾಡಿ ಅಂಚೆ ಕಚೇರಿ ಬಳಿ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಬಿಹಾರ ರಾಜ್ಯದ ಅರಾರಿಯಾ ಜಿಲ್ಲೆಯ ಝೌವಾ ಗ್ರಾಮ, ಬಟುರ್ಬಾರಿ ನಿವಾಸಿ ಎಂ.ಡಿ.ನೌಸರ್(24) ಎಂದು ಗುರುತಿಸಲಾಗಿದೆ. ಗಾಯಗೊಂಡ ಸ್ಕೂಟರ್ ಸವಾರ ನೆಲ್ಯಾಡಿ ಗ್ರಾಮದ ಕುವೆಕೊಪ್ಪದ ನಿವಾಸಿ ಸಂದೇಶ್ ಎಂದು ತಿಳಿದುಬಂದಿದೆ.
ಭಾನುವಾರದಂದು ರಾತ್ರಿ ಸುಮಾರು 9.30ರ ವೇಳೆಗೆ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಅಂಚೆ ಕಚೇರಿ ಸಮೀಪ ಸರ್ವಿಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಗೋಳಿತೊಟ್ಟಿನಲ್ಲಿ ಹಿಟಾಚಿ ಕೆಲಸ ಮುಗಿಸಿ, ಅದನ್ನು ನೆಲ್ಯಾಡಿಯ ಭಾರತ್ ಪೆಟ್ರೋಲ್ ಪಂಪ್ನಲ್ಲಿ ನಿಲ್ಲಿಸಿ ಮನೆಗೆ ತೆರಳುತ್ತಿದ್ದ ಯತೀಶ್ ಬಿ. ಅವರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಡೆಗೆ ಸಂಚರಿಸುತ್ತಿದ್ದಾಗ ಅಪಘಾತವನ್ನು ಗಮನಿಸಿದ್ದಾರೆ.
ಈ ವೇಳೆ ಧನಂಜಯ ಅವರಿಗೆ ಸೇರಿದ ಬೈಕ್ ಅನ್ನು ಸವಾರ ನೌಸರ್ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳ ಸವಾರರು ರಸ್ತೆಗೆ ಬಿದ್ದಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಯತೀಶ್ ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ಉಪಚರಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ನೌಸರ್ ಅವರನ್ನು ಆಂಬ್ಯುಲೆನ್ಸ್ ಮೂಲಕ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಸ್ಕೂಟರ್ ಸವಾರ ಸಂದೇಶ್ ಅವರ ಮುಖಕ್ಕೆ ರಕ್ತಗಾಯವಾಗಿದ್ದು, ಅವರನ್ನು ಆಟೋರಿಕ್ಷಾ ಮೂಲಕ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಮೋಟಾರ್ ಸೈಕಲ್ ಸವಾರನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಯತೀಶ್ ಬಿ ಅವರು ನೀಡಿದ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








































































































