




ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕು ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿ ಶನಿವಾರ ಬೆಳಗ್ಗೆ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ನಡೆದಿದೆ.
ಬಿ.ಸಿ.ರೋಡ್ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿಗೆ, ಸಕಲೇಶಪುರ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಅನೂಪ್ ಕುಮಾರ್, ಅವರ ಪತ್ನಿ ವೀಣಾ ಹಾಗೂ ಅತ್ತೆ ರೇಖಾ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿವೆ.
ಓವರ್ಟೇಕ್ ಮಾಡುವ ವೇಳೆ ಅಪಘಾತ
ಶನಿವಾರ ಬೆಳಗ್ಗೆ 6.55ರ ಸುಮಾರಿಗೆ ಲಾರಿ ಚಾಲಕ ಸಕಲೇಶಪುರ ಕಡೆಯಿಂದ ಮಂಗಳೂರು ಕಡೆಗೆ ಲಾರಿಯನ್ನು ಚಲಾಯಿಸುತ್ತಿದ್ದನು. ಈ ವೇಳೆ ಎದುರಿನಿಂದ ಬರುತ್ತಿದ್ದ ಮತ್ತೊಂದು ಲಾರಿಯನ್ನು ಓವರ್ಟೇಕ್ ಮಾಡಲು ಹೋಗಿ ಬಿ.ಸಿ.ರೋಡ್ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿಗೆ ಲಾರಿ ರಭಸವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಕಾರು ಚಾಲನೆ ಮಾಡುತ್ತಿದ್ದ ಅನೂಪ್ ಕುಮಾರ್ ಅವರ ಎಡಕಾಲಿಗೆ ಹಾಗೂ ಕುತ್ತಿಗೆಯ ಬಲಭಾಗದಲ್ಲಿ ಗಾಯಗಳಾಗಿವೆ. ಅವರ ಪತ್ನಿ ವೀಣಾ ಅವರ ಬೆನ್ನಿಗೆ ಪೆಟ್ಟು ಬಿದ್ದಿದೆ. ಅನೂಪ್ ಕುಮಾರ್ ಅವರ ಅತ್ತೆ ರೇಖಾ ಅವರ ಹಣೆಗೆ ರಕ್ತಗಾಯವಾಗಿದ್ದು, ಬಲಗೈ ಮುರಿತದ ಜೊತೆಗೆ ಮುಖ ಹಾಗೂ ಮೈಕೈಗೆ ಗುದ್ದಿದ ಗಾಯಗಳಾಗಿವೆ.
ಗಾಯಗೊಂಡವರನ್ನು ಮೊದಲು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನೂಪ್ ಕುಮಾರ್ ಮತ್ತು ಅವರ ಪತ್ನಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದು, ರೇಖಾ ಅವರು ಒಳರೋಗಿಯಾಗಿ ದಾಖಲಾಗಿದ್ದಾರೆ.
ಈ ಅಪಘಾತಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.








































































































