


ಧರ್ಮಸ್ಥಳ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮರುತನಿಖೆಯ ಭಾಗವಾಗಿ, ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ಮಣ್ಣಸಂಕದ ಕಾಡಿನಲ್ಲಿ ಸೌಜನ್ಯ ಅವರ ಮೃತದೇಹ ಪತ್ತೆಯಾಗಿದ್ದ ಸ್ಥಳಕ್ಕೆ ವಿಶೇಷ ತನಿಖಾ ತಂಡ (ಎಸ್ಐಟಿ) ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಎಸಿಪಿ ಮನೋಜ್ ಕುಮಾರ್ ನೇತೃತ್ವದ ಎಸ್ಐಟಿ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನಾ ಕಾರ್ಯ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ಮಣ್ಣಸಂಕ ಹಾಗೂ ಪಾಂಗಳ ಕ್ರಾಸ್ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸೌಜನ್ಯ ಅವರ ಮೃತದೇಹ ಮೊದಲು ಪತ್ತೆಹಚ್ಚಿದ ಸಂಬಂಧಿ ಪುರಂದರ ಗೌಡ ಹಾಗೂ ಪ್ರಕರಣದ ದೂರುದಾರರಾಗಿರುವ ಅವರನ್ನು ಘಟನಾ ಸ್ಥಳಕ್ಕೆ ಕರೆಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ತುಕರಾಮ ಗೌಡ ಅವರನ್ನೂ ಎಸ್ಐಟಿ ತಂಡ ಸ್ಥಳಕ್ಕೆ ಕರೆಸಿಕೊಂಡಿದೆ ಎಂದು ತಿಳಿದುಬಂದಿದೆ.
ಪರಿಶೀಲನಾ ಕಾರ್ಯದಲ್ಲಿ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ತಂಡ, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ತಂಡ, ಗ್ರಾಮ ಆಡಳಿತಾಧಿಕಾರಿ, ಪಂಚರು, ವೈದ್ಯರು ಹಾಗೂ ಛಾಯಾಚಿತ್ರ ಮತ್ತು ವಿಡಿಯೊ ತಂಡದವರು ಭಾಗವಹಿಸಿದ್ದಾರೆ.
ಘಟನಾ ಸ್ಥಳದ ಭೌತಿಕ ಸ್ಥಿತಿಗತಿಗಳನ್ನು ಪರಿಶೀಲಿಸುವುದು, ಲಭ್ಯವಿರುವ ಮಾಹಿತಿಗಳನ್ನು ದಾಖಲಿಸಿಕೊಳ್ಳುವುದು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ತಂಡ ಕಾರ್ಯನಿರ್ವಹಿಸುತ್ತಿದೆ.
ಪೊಲೀಸ್ ಬಂದೋಬಸ್ತ್
ಎಸ್ಐಟಿ ತಂಡದ ಭೇಟಿ ಮತ್ತು ಸ್ಥಳ ಪರಿಶೀಲನೆಯ ಹಿನ್ನೆಲೆಯಲ್ಲಿ ಮಣ್ಣಸಂಕ ಹಾಗೂ ಪಾಂಗಳ ಕ್ರಾಸ್ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ತನಿಖಾ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೌಜನ್ಯ ಪ್ರಕರಣದ ಮರುತನಿಖೆಯ ಭಾಗವಾಗಿ ನಡೆಯುತ್ತಿರುವ ಈ ಸ್ಥಳ ಪರಿಶೀಲನೆಯು ಸಾರ್ವಜನಿಕರ ಗಮನ ಸೆಳೆದಿದೆ.








































































































