






ಕೊಕ್ಕಡ: ಸಂತ ಜೋನ್ ಬ್ಯಾಪ್ಟಿಸ್ಟ್ ದೇವಾಲಯದಲ್ಲಿ ನೂತನ ಯಾಜಕರಾಗಿ ಗುರುದೀಕ್ಷೆ ಸ್ವೀಕರಿಸಿದ ರೆ| ಫಾ| ವಿಲ್ಫ್ರೆಡ್ ಸ್ಟೀವನ್ ರೊಡ್ರಿಗಸ್ ಹಾಗೂ ಡಾಕ್ಟರೇಟ್ ಪದವಿ ಪಡೆದ ಡಾ| ಸೈಮನ್ ಜೋಯ್ಸನ್ ಗಲ್ಫಾಂವೊ ಅವರನ್ನು ಅಭಿನಂದಿಸಿ ಸನ್ಮಾನಿಸುವ ಕಾರ್ಯಕ್ರಮ ಭಾನುವಾರದಂದು ನಡೆಯಿತು.
ಕಾರ್ಯಕ್ರಮದ ಅಂಗವಾಗಿ ನೂತನ ಯಾಜಕರಾಗಿ ಗುರುದೀಕ್ಷೆ ಸ್ವೀಕರಿಸಿದ ರೆ| ಫಾ| ವಿಲ್ಫ್ರೆಡ್ ಸ್ಟೀವನ್ ರೊಡ್ರಿಗಸ್ ಅವರು ದಿವ್ಯ ಬಲಿಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಿದರು. ಈ ಸಂದರ್ಭದಲ್ಲಿ ಅರ್ಥಪೂರ್ಣ ಸಂದೇಶವನ್ನು ನೀಡಲಾಯಿತು. ಚರ್ಚ್ನ ಧರ್ಮಗುರು ವ| ಫಾ| ಅನಿಲ್ ಪ್ರಕಾಶ್ ಡಿಸಿಲ್ವಾ ಅವರು ಬಲಿಪೂಜೆಯಲ್ಲಿ ಪಾಲ್ಗೊಂಡರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಶಾಂತಿಪ್ರಿಯಾ ಡಿಸೋಜ ಅವರು ಸ್ವಾಗತಿಸಿದರು. ಫ್ಲೋರಿನ್ ರೇಗೊ ಅವರು ಶುಭಹಾರೈಸಿದರು. ಗಾಯನ ಪಂಗಡದ ಸದಸ್ಯರು ಗಾಯನದ ಮೂಲಕ ನೂತನ ಯಾಜಕ ಹಾಗೂ ಡಾಕ್ಟರೇಟ್ ಪದವೀಧರರಿಗೆ ಶುಭಾಶಯ ಸಲ್ಲಿಸಿದರು.
ಸೆ.10ರಂದು ನೂತನ ಯಾಜಕರಾಗಿ ಗುರುದೀಕ್ಷೆ ಪಡೆದ ರೆ| ಫಾ| ವಿಲ್ಫ್ರೆಡ್ ಸ್ಟೀವನ್ ರೊಡ್ರಿಗಸ್ ಅವರನ್ನು ಹಾಗೂ ಶುದ್ಧ ಇಂಧನ ಕುರಿತಂತೆ ಸಂಶೋಧನೆ ನಡೆಸಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನಿಂದ ಡಾಕ್ಟರೇಟ್ ಪದವಿ ಪಡೆದ ಕೊಕ್ಕಡ ಚರ್ಚ್ನ ಲಿಗೊರಿ ಗಲ್ಫಾಂವೊ ಹಾಗೂ ಜೆಸಿಂತಾ ವೊನಿಸ್ ದಂಪತಿಯ ಪುತ್ರ ಡಾ| ಸೈಮನ್ ಜೋಯ್ಸನ್ ಗಲ್ಫಾಂವೊ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮವನ್ನು ವಿನ್ನಿಫ್ರೆಡ್ ಕ್ಲಾರಾ ಡಿಸೋಜ ಹಾಗೂ ಜೆನಿವಿವ್ ಫೆರ್ನಾಂಡಿಸ್ ನೆರವೇರಿಸಿದರು. ಬಳಿಕ ಚರ್ಚ್ನ ಧರ್ಮಗುರು ವ| ಫಾ| ಅನಿಲ್ ಪ್ರಕಾಶ್ ಡಿಸಿಲ್ವಾ ಅವರು ಶುಭಹಾರೈಸಿದರು.
ರೆ| ಫಾ| ವಿಲ್ಫ್ರೆಡ್ ಸ್ಟೀವನ್ ರೊಡ್ರಿಗಸ್ ಹಾಗೂ ಡಾ| ಸೈಮನ್ ಜೋಯ್ಸನ್ ಗಲ್ಫಾಂವೊ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಡಿಸೋಜ ಗಲ್ಫಾಂವೊ. ರಿತೇಶ್ ಸ್ಟ್ರೆಲ್ಲಾ ಕಾರ್ಯಕ್ರಮ ನಿರೂಪಿಸಿದರು.








































































































