ನೆಲ್ಯಾಡಿ: 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ವತಿಯಿಂದ ದೀಪಾವಳಿ ಹಬ್ಬದ ಆಚರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಸಂಘದ ಕಚೇರಿ ಆವರಣದಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಸಂಘದ ಕಚೇರಿಯಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಬಳಿಕ ಸಂಘದ ಅಧ್ಯಕ್ಷೆ ಉಷಾ ಅಂಚನ್, ಗಾಯಕಿ ಸಂಧ್ಯಾ ಮಂಡೆಕೋಲು, ಮಹಿಳಾ ಪ್ರಮುಖರಾದ ರತಿಲತಾ, ಹೇಮಲತಾ ಬಾಕಿಲ, ಜಯಂತಿ, ಅನಿತಾ ಐಐಸಿಟಿ, ಸುಪ್ರೀತಾ ರವಿಚಂದ್ರ, ಸವಿತಾ ಸರ್ವೋತ್ತಮ ಹಾಗೂ ಮೇರಿ ಕೆ. ಉಲಹನ್ನನ್ ಮತ್ತಿತರರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಹಾಗೂ ಗಣ್ಯರು ಹಣತೆ ಹಚ್ಚುವ ಮೂಲಕ ದೀಪಾವಳಿ ಸಂಭ್ರಮಕ್ಕೆ ಮೆರಗು ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಲ ಕಲಾವಿದೆ ಅದ್ವಿಕಾ ಬಾಕಿಲ ಹಾಗೂ ಪುಣೆಯಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಮೊಹಮ್ಮದ್ ಹಿಶಾಮ್, ಫಾತಿಮತ್ ಫಸಿಲಾ, ಮಹಮ್ಮದ್ ಸಾನಿ, ಆರಾಧ್ಯ ಕೆ., ಅದ್ವೈತ್ ಕೆ., ವರ್ಣಿತ್ ಪಿ.ವಿ. ಹಾಗೂ ಮನ್ವಿತ್ ಕುಮಾರ್ ಯು.ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಅಲ್ಫೋನ್ಸಾ ಮಥಾಯಿ ಅವರನ್ನೂ ಗೌರವಿಸಲಾಯಿತು. ಸಂಘದ ಸಿಬ್ಬಂದಿ ರಶ್ಮಿತಾ ಸಾಧಕ ವಿದ್ಯಾರ್ಥಿಗಳ ಸಾಧನೆಗಳನ್ನು ಪರಿಚಯಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್ ಅವರನ್ನು ನೆಲ್ಯಾಡಿ ವರ್ತಕ ಸಂಘ ಹಾಗೂ ಕಾಮಧೇನು ಮಹಿಳಾ ಸಹಕಾರಿ ಸಂಘದ ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಸುನೀಶ್ ಮತ್ತು ಪ್ರಜ್ಞಾ ದಂಪತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಜಯಕುಮಾರ್ ಸೊರಕೆ, ಗಂಗಾಧರ ಶೆಟ್ಟಿ ಹೊಸಮನೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್. ದುರ್ಗಾಶ್ರೀ, ನೆಲ್ಯಾಡಿ ಸೀನಿಯರ್ ಚೇಂಬರ್ ಅಧ್ಯಕ್ಷ ಉಲಹನ್ನನ್, ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಪ್ರವೀಣಿ ಶೆಟ್ಟಿ, ಕೌಕ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಕೆ. ಇಬ್ರಾಹಿಂ, ನೆಲ್ಯಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಲಾಂ ಬಿಲಾಲ್ ಮತ್ತು ಲಿಸ್ಸಿ ಅಬ್ರಹಾಂ, ನೆಲ್ಯಾಡಿ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಮುಖರಾದ ಸತೀಶ್ ಬೀರುಕ್ಕು, ಪದ್ಮಯ್ಯ ಕಟ್ಟೆಮಜಲು, ಡಾ.ಸುಧಾಕರ, ಡಾ.ಸದಾನಂದ ಕುಂದರ್, ರಮೇಶ್ ಬಾಣಜಾಲು, ಇಸ್ಮಾಯಿಲ್ ಕೋಲ್ಪೆ, ಕೆ.ಕೆ. ಅಬೂಬಕ್ಕರ್ ಕೋಲ್ಪೆ, ಅಬ್ದುಲ್ ಜಬ್ಬಾರ್ ನೆಲ್ಯಾಡಿ, ಮೋಹನ್ ಕುಮಾರ್ ಡಿ. ಮತ್ತಿತರರು ಉಪಸ್ಥಿತರಿದ್ದು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಕಲಾವಿದರಾದ ಸಂಧ್ಯಾ ಮಂಡೆಕೋಲು, ಪ್ರಶಾಂತ್ ಕಡಬ, ಉದಯಕುಮಾರ್, ಅಶೋಕ ಆಚಾರ್ಯ, ಪ್ರಸನ್ನ ಮತ್ತಿತರರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅತಿಥಿಗಳು ಹಾಗೂ ಸಂಘದ ಸದಸ್ಯರಿಗಾಗಿ ಸ್ಥಳದಲ್ಲೇ ಬಿಸಿ ಬಿಸಿ ದೋಸೆ ತಯಾರಿಸಿ ಆತಿಥ್ಯ ನೀಡಲಾಯಿತು. ವಿವಿಧ ಮೋಜಿನ ಆಟಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಅಧ್ಯಕ್ಷೆ ಉಷಾ ಅಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಮೇಘನಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೈತನ್ಯ, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ಸಹಕರಿಸಿದರು.