






ನೆಲ್ಯಾಡಿ: ಗ್ರಾಮೀಣ ಭಾಗದ ಜನರಿಗೆ ತುರ್ತು ಆರೋಗ್ಯ ಸೇವೆಯ ಸಂದರ್ಭದಲ್ಲಿ ತ್ವರಿತ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಅಶ್ವತ್ಥ ಗೆಳೆಯರ ಬಳಗ (ರಿ.) ಹೊಸಮಜಲು–ಕೌಕ್ರಾಡಿ–ನೆಲ್ಯಾಡಿ ವತಿಯಿಂದ ನೂತನ ಆಂಬ್ಯುಲೆನ್ಸ್ ಸೇವೆ ಆರಂಭಿಸಲಾಗುತ್ತಿದೆ. ಆಂಬ್ಯುಲೆನ್ಸ್ ಸೇವೆಯ ಉದ್ಘಾಟನಾ ಸಮಾರಂಭ ಭಾನುವಾರದಂದು ಬೆಳಿಗ್ಗೆ 9.30ಕ್ಕೆ ಹೊಸಮಜಲಿನ ಅಶ್ವತ್ಥಕಟ್ಟೆಯ ಮುಂಭಾಗದಲ್ಲಿ ನಡೆಯಲಿದೆ.
ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಉಪಸ್ಥಿತಿಯಲ್ಲಿ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಾಂಕೇತಿಕ ಕಾರ್ಯಕ್ರಮವೂ ನಡೆಯಲಿದೆ.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಎದುರಾದಾಗ ಆಸ್ಪತ್ರೆಗೆ ತಲುಪಲು ಸಾರಿಗೆ ಸೌಲಭ್ಯ ದೊರೆಯುವುದು ಪ್ರಮುಖ ಸವಾಲಾಗಿದೆ. ಇಂತಹ ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ನೆರವಾಗುವ ಉದ್ದೇಶದಿಂದ ಅಶ್ವತ್ಥ ಗೆಳೆಯರ ಬಳಗ ಈ ಆಂಬ್ಯುಲೆನ್ಸ್ ಸೇವೆಯನ್ನು ಸಾರ್ವಜನಿಕರಿಗೆ ಸಮರ್ಪಿಸುತ್ತಿದೆ.








































































































