ಹುಲಿ ವೇಷದ ತರಬೇತಿ ಮುಗಿಸಿ ಬೀಚ್ಗೆ ತೆರಳಿದ್ದ ಬಾಲಕ; ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ, ಮುಳುಗು ತಜ್ಞರಿಂದ ಶೋಧ







ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ರೆಂಕೆದ ಗುತ್ತು ಮೂಲದ ಶ್ರೇಯಸ್ ಎಸ್. ಕುಂಬಾರ (14) ನಾಪತ್ತೆಯಾದ ಬಾಲಕ. ಅ.4ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ತನ್ನ ನಾಲ್ವರು ಅಪ್ರಾಪ್ತ ಸ್ನೇಹಿತರೊಂದಿಗೆ ದಸರಾ ಹಬ್ಬದ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ. ತರಬೇತಿ ಮುಗಿದ ಬಳಿಕ ಸ್ಟೇಟ್ ಬ್ಯಾಂಕ್ನಿಂದ ಪಣಂಬೂರು ಬೀಚ್ಗೆ ತೆರಳಿದ ಅವರು, ಸಂಜೆ ಸುಮಾರು 4.30ರಿಂದ 5 ಗಂಟೆಯ ನಡುವೆ ಕೂರಿಕಟ್ಟ ಸಮುದ್ರ ತೀರಕ್ಕೆ ಹೋಗಿದ್ದರು.
ಸಂಜೆ ಸುಮಾರು 6 ಗಂಟೆಗೆ ಶ್ರೇಯಸ್ ಸ್ನೇಹಿತರೊಂದಿಗೆ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ, ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಬಳಿಕ ಆತ ಕಾಣೆಯಾಗಿದ್ದಾನೆ.
ಘಟನೆಯಿಂದ ಭಯಗೊಂಡಿದ್ದ ಆತನ ಅಪ್ರಾಪ್ತ ಸ್ನೇಹಿತರು ಈ ವಿಚಾರವನ್ನು ತಕ್ಷಣ ಮನೆಯವರಿಗೆ ತಿಳಿಸಿರಲಿಲ್ಲ. ಅ.5ರಂದು ಬೆಳಿಗ್ಗೆ ಬಾಲಕನ ಮನೆಯವರಿಗೆ ಘಟನೆ ಕುರಿತು ಮಾಹಿತಿ ಲಭಿಸಿದೆ. ಬಳಿಕ ಬಾಲಕನ ತಂದೆ ಶೇಷಪ್ಪ ಅವರು ನೀಡಿದ ದೂರಿನ ಮೇರೆಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 127/2026ರಂತೆ ಮನುಷ್ಯ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ನಾಪತ್ತೆಯಾದ ಬಾಲಕನ ಪತ್ತೆಗಾಗಿ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಹಾಗೂ ಸಮುದ್ರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ ಸಹಕಾರ ಕೋರಲಾಗಿದೆ. ಲೈಫ್ ಗಾರ್ಡ್ಗಳು, ಮುಳುಗು ತಜ್ಞರು ಹಾಗೂ ಸ್ಥಳೀಯ ಮೀನುಗಾರರ ನೆರವಿನಿಂದ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರಿದಿದೆ.








































































































